ಮಹಾರಾಷ್ಟ್ರ ಭೇಟಿಯ ವೇಳೆ 'ಶಿಷ್ಟಾಚಾರ ಲೋಪ'; ಸಿಜೆಐ ಬಿಆರ್ ಗವಾಯಿ ಅಸಮಾಧಾನ

ಸಿಜೆಐ ಬಿಆರ್ ಗವಾಯಿ (PTI)
ಮುಂಬೈ: ನೂತನವಾಗಿ ನೇಮಕಗೊಂಡ ಮುಖ್ಯ ನ್ಯಾಯಾಧೀಶ (ಸಿಜೆಐ) ಬಿಆರ್ ಗವಾಯಿ ಅವರು ರವಿವಾರ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಲಿಸಿದ ಶಿಷ್ಟಾಚಾರದಲ್ಲಿನ ಲೋಪದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟೀಕಿಸಿದ ಸಿಜೆಐ, ತಮ್ಮ ಮುಂಬೈ ಭೇಟಿ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರು ಸೇರಿದಂತೆ ರಾಜ್ಯದ ಪ್ರಮುಖ ಅಧಿಕಾರಿಗಳು ತಮ್ಮನ್ನು ಸ್ವಾಗತಿಸಲು ಗೈರುಹಾಜರಾಗಿದ್ದರು ಎಂಬುದನ್ನು ಉಲ್ಲೇಖಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಗೋವಾದ ಬಾರ್ ಕೌನ್ಸಿಲ್ ಅವರ ಗೌರವಾರ್ಥವಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಗವಾಯಿ, ಪ್ರಜಾಪ್ರಭುತ್ವದ ಮೂರು ಸ್ತಂಭಗಳಾದ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳಲ್ಲಿ ಪರಸ್ಪರ ಗೌರವದ ಮಹತ್ವವನ್ನು ಒತ್ತಿ ಹೇಳಿದ್ದಾರೆ.
"ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಭಾರತದ ಮುಖ್ಯ ನ್ಯಾಯಾಧೀಶರಾದಾಗ ಮತ್ತು ಮೊದಲ ಬಾರಿಗೆ ಮಹಾರಾಷ್ಟ್ರಕ್ಕೆ ಭೇಟಿ ನೀಡಿದಾಗ, ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಅಥವಾ ಮುಂಬೈ ಪೊಲೀಸ್ ಆಯುಕ್ತರು ಹಾಜರಿರುವುದು ಅಗತ್ಯವಿಲ್ಲ ಎಂದು ಭಾವಿಸಿದರೆ, ಅವರು ಅದರ ಬಗ್ಗೆ ಯೋಚಿಸಬೇಕಾಗುತ್ತದೆ" ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.
ಇದಲ್ಲದೆ, ಶಿಷ್ಟಾಚಾರವು ಕೇವಲ ಔಪಚಾರಿಕತೆ ಮಾತ್ರವಲ್ಲ, ಸಾಂವಿಧಾನಿಕ ಅಧಿಕಾರಿಗಳು ಪರಸ್ಪರ ನೀಡುವ ಗೌರವದ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ. ಶಿಷ್ಟಾಚಾರಗಳು ಹೊಸದೇನಲ್ಲ - ಇದು ಒಂದು ಸಾಂವಿಧಾನಿಕ ಸಂಸ್ಥೆಯು ಇನ್ನೊಂದಕ್ಕೆ ನೀಡುವ ಗೌರವದ ಪ್ರಶ್ನೆಯಾಗಿದೆ ಎಂದು ಅವರು ತಮ್ಮ ಅಸಮಾಧಾನ ಹೊರ ಹಾಕಿದರು.
ನಾನು ಇಂತಹ ಸಣ್ಣ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಬಯಸದಿದ್ದರೂ, ಜನರಿಗೆ ಅದರ ಬಗ್ಗೆ ತಿಳಿಯುವಂತೆ ಮಾಡಲು ಅದನ್ನು ಉಲ್ಲೇಖಿಸುವ ಅಗತ್ಯ ಇದೆ ಎಂದು ಸಿಜೆಐ ಹೇಳಿದ್ದಾರೆ.
ಕಳೆದ ವಾರ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ಬಿ.ಆರ್. ಗವಾಯಿ ಅವರು ಅತ್ಯುನ್ನತ ನ್ಯಾಯಾಂಗ ಹುದ್ದೆಯನ್ನು ಅಲಂಕರಿಸಿದ ಎರಡನೇ ದಲಿತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.







