ನ್ಯಾ. ಬೇಲಾ ತ್ರಿವೇದಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸದ ವಕೀಲರ ಸಂಘದ ನಿಲುವಿಗೆ ಸಿಜೆಐ ಅಸಮಾಧಾನ

Photo credit: ANI
ಹೊಸದಿಲ್ಲಿ: ನಿವೃತ್ತವಾಗುತ್ತಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ಬೇಲಾ ಎಂ ತ್ರಿವೇದಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸದ್ದಕ್ಕೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಮತ್ತು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ (SCAORA) ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಾಧೀಶೆ ಬೇಲಾ ಎಂ ತ್ರಿವೇದಿ ಅವರನ್ನು ಶುಕ್ರವಾರ ಸುಪ್ರೀಂ ಕೋರ್ಟ್ನಲ್ಲಿ ಗೌರವಿಸಲು ಆಯೋಜಿಸಲಾದ ಸಮಾರಂಭದ ಅಧ್ಯಕ್ಷತೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ವಹಿಸಿದ್ದರು.
ವಕೀಲರ ಸಂಘಗಳು ತಳೆದ ನಿರ್ಧಾರವನ್ನು ವಿರೋಧಿಸಿದ ಬಿ ಆರ್ ಗವಾಯಿ ಅವರು “ಅಸೋಸಿಯೇಶನ್ ಗಳು ತೆಗೆದುಕೊಂಡ ನಿಲುವನ್ನು, ನಾನು ಬಹಿರಂಗವಾಗಿ ಖಂಡಿಸಬೇಕು. ಏಕೆಂದರೆ ನಾನು ಸರಳ ಮತ್ತು ನೇರವಾಗಿರುವುದರಲ್ಲಿ ನಂಬಿಕೆ ಹೊಂದಿದ್ದೇನೆ. ಅಂತಹ ಸಂದರ್ಭಗಳಲ್ಲಿ, ಅಂತಹ ನಿಲುವನ್ನು ಸಂಘವು ತೆಗೆದುಕೊಳ್ಳಬಾರದಿತ್ತು” ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ತ್ರಿವೇದಿ ಅವರು ವಕೀಲರನ್ನು ಗುರಿಯಾಗಿಸಿಕೊಂಡಿರುವ ಹಲವಾರು ನಿರ್ಧಾರಗಳಿಂದ ಎರಡು ಬಾರ್ ಸಂಸ್ಥೆಗಳ ಕೋಪಕ್ಕೆ ಗುರಿಯಾಗಿದ್ದರು. ಇತ್ತೀಚೆಗೆ ತ್ರಿವೇದಿ ಅವರು ಪ್ರಕರಣವೊಂದರಲ್ಲಿ ಹಾಜರಾಗುವ ಎಲ್ಲಾ ವಕೀಲರ ಉಪಸ್ಥಿತಿಯನ್ನು ದಾಖಲಿಸಲು ನಿರಾಕರಿಸಿ ತೀರ್ಪು ನೀಡಿದ್ದರು, ಇದನ್ನು SCBA ಮತ್ತು SCAORA ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವು. ಅದಲ್ಲದೆ, ಇನ್ನಿತರ ಘಟನೆಗಳೂ ತ್ರಿವೇದಿ ಬಗ್ಗೆ ವಕೀಲರ ಸಂಘಗಳು ಅಸಮಾಧಾನ ಹೊಂದಿದ್ದವು. ಈ ಹಿನ್ನೆಲೆಯಲ್ಲಿ ಅವರಿಗೆ ವಿದಾಯ ಕೋರುವ ಸಮಾರಂಭಕ್ಕೆ ಗೈರು ಹಾಜರಿಯಾಗಿದೆ ಎನ್ನಲಾಗಿದೆ.
ಎರಡು ವಕೀಲ ಸಂಸ್ಥೆಗಳು ತೆಗೆದುಕೊಂಡ ನಿರ್ಧಾರದ ಹೊರತಾಗಿಯೂ, SCBA ಅಧ್ಯಕ್ಷ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು SCBA ಉಪಾಧ್ಯಕ್ಷೆ ಮತ್ತು ಹಿರಿಯ ವಕೀಲೆ ರಚನಾ ಶ್ರೀವಾಸ್ತವ ಅವರೊಂದಿಗೆ ನ್ಯಾಯಮೂರ್ತಿ ತ್ರಿವೇದಿಗೆ ವಿದಾಯ ಹೇಳಲು ವಿಧ್ಯುಕ್ತ ಪೀಠದ ಮುಂದೆ ಹಾಜರಾಗಿದ್ದರು. ಈ ಹಿರಿಯ ವಕೀಲರ ನಿರ್ಧಾರವನ್ನು ಇದೇ ವೇಳೆ ಮುಖ್ಯ ನ್ಯಾಮೂರ್ತಿ ಗವಾಯಿ ಅವರು ಶ್ಲಾಘಿಸಿದ್ದಾರೆ.







