ಪೊಲೀಸ್ ವಶದಲ್ಲಿ ಪ್ರಣಯ್ ಅಹಿರೇ ಮೇಲೆ ಕ್ರೂರ ಹಲ್ಲೆ: ಸಿಜೆಪಿ ಆರೋಪ
ಫೋನ್ಗಳನ್ನು ಹ್ಯಾಕ್ ಮಾಡಿ, ನಕಲಿ ಸಾಕ್ಷ್ಯ ಅಳವಡಿಸಿರುವ ಆತಂಕ: ಸರಕಾರದ ಅಂತ್ಯ ಸಮೀಪಿಸಿದೆ; ಸೌರವ್ ದಾಸ್

ರತ್ನಾ ಸಿಂಗ್, ಅಶುತೋಷ್ ರಂಕಾ, ಸೌರವ್ ದಾಸ್ (Photo: India Today)
ಹೊಸದಿಲ್ಲಿ: CJPಯ ಮುಂಬೈ ಸಂಯೋಜಕ ಪ್ರಣಯ್ ಅಹಿರೇ ಅವರ ಮೇಲೆ ಪೊಲೀಸ್ ವಶದಲ್ಲಿದ್ದಾಗ ಕ್ರೂರ ಹಲ್ಲೆ ನಡೆಸಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಆರೋಪಿಸಿದೆ.
ತಮ್ಮ ಫೋನ್ ಗಳನ್ನು ಪೊಲೀಸರು 24 ಗಂಟೆಗಳ ಕಾಲ ವಶದಲ್ಲಿಟ್ಟುಕೊಂಡಿದ್ದರು. ಅವುಗಳನ್ನು ಹ್ಯಾಕ್ ಮಾಡಿರಬಹುದು, ಕ್ಲೋನ್ ಮಾಡಿರಬಹುದು ಅಥವಾ ಕೃತಕ ಸಾಕ್ಷ್ಯಗಳನ್ನು ಅಳವಡಿಸಿರಬಹುದು ಎಂಬ ಆತಂಕವಿದೆ ಎಂದು ಸಿಜೆಪಿ ಸದಸ್ಯ ಸೌರವ್ ದಾಸ್ ಹೇಳಿದ್ದಾರೆ.
ದಿಲ್ಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಮಾತನಾಡಿದ ದಾಸ್, ಸರಕಾರವು ಸಂಪೂರ್ಣವಾಗಿ ವಿವೇಚನೆ ಕಳೆದುಕೊಂಡಿದೆ ಎಂದು ಆರೋಪಿಸಿದರು. ‘ಈ ಸರಕಾರದ ಅಂತ್ಯ ಸಮೀಪಿಸಿದೆ’ ಎಂದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ‘ಅಸಲಿ ದೇಶವಿರೋಧಿ’ ಎಂದು ಕರೆದ ದಾಸ್, ಅವರನ್ನು ರಕ್ಷಿಸಲು ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು.
ವಶಕ್ಕೆ ಪಡೆಯುವ ಕ್ರಮಗಳನ್ನು ಖಂಡಿಸಿದ ಸಿಜೆಪಿ ತಂಡ, ಸರಕಾರವು ನಾಗರಿಕರು ಮತ್ತು ಪತ್ರಕರ್ತರ ವಿರುದ್ಧವೇ ಸಮರ ಸಾರಿದೆ ಎಂದು ಹೇಳಿದೆ.
ದಿಲ್ಲಿ ಪೊಲೀಸರ ವಿರುದ್ಧ ರಂಕಾ ಆರೋಪ
ಸಿಜೆಪಿ ವಕ್ತಾರ ಅಶುತೋಷ್ ರಂಕಾ ಅವರು, ಅಭಿಜಿತ್ ದೀಪ್ಕೆ ಮತ್ತು ಸೌರವ್ ದಾಸ್ ಅವರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ದಿಲ್ಲಿ ಪೊಲೀಸರು ‘ಅಮಾನವೀಯ ಮುಖ’ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇವರಿಬ್ಬರನ್ನು ಅಪಹರಿಸಲಾಗಿದೆ ಎಂದು ಆರೋಪಿಸಿದ ರಂಕಾ, ಶನಿವಾರ ಅಭಿಜಿತ್ ದೀಪ್ಕೆ ಅವರ ಅಜ್ಜಿ ನಿಧನರಾದ ವಿಷಯವನ್ನು ಅವರಿಗೆ ತಿಳಿಸಿದಾಗ ಪೊಲೀಸರು ಸಂವೇದನಾಶೂನ್ಯವಾಗಿ ವರ್ತಿಸಿದರು ಎಂದು ಹೇಳಿದರು.
ಈ ಘಟನೆಯನ್ನು ಪೊಲೀಸರು ಪ್ರದರ್ಶನದಂತೆ ಬಿಂಬಿಸಲು ಪ್ರಯತ್ನಿಸಿದರು ಎಂದೂ ಅವರು ಆರೋಪಿಸಿದರು.






