ಪಾಸ್ಪೋರ್ಟ್ ಸೋರಿಕೆ ಆರೋಪ: ಬಿಜೆಪಿ ಬೆಂಬಲಿತ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ CJP ಸಹ ಸಂಚಾಲಕ ಸೌರವ್ ದಾಸ್ ಕಿಡಿ
ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ

ಸೌರವ್ ದಾಸ್ | Photo Credit : PTI
ಹೊಸದಿಲ್ಲಿ: ತಮ್ಮ ಪಾಸ್ಪೋರ್ಟ್ ನ ವೈಯಕ್ತಿಕ ವಿವರಗಳನ್ನು ಬಿಜೆಪಿ ಬೆಂಬಲಿತ ಸಾಮಾಜಿಕ ಜಾಲತಾಣ ಖಾತೆಗಳು ಸೋರಿಕೆ ಮಾಡಿವೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸಹ-ಸಂಚಾಲಕ ಸೌರವ್ ದಾಸ್ ಆರೋಪಿಸಿದ್ದಾರೆ. ನಾಗರಿಕರ ವೈಯಕ್ತಿಕ ದಾಖಲೆಗಳ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ಅವರು, ಇಂತಹ ಸೋರಿಕೆಗಳು ಸಾಮಾನ್ಯವೇ ಎಂದು ವಿದೇಶಾಂಗ ಸಚಿವಾಲಯವನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿನ ಖಾತೆಯಲ್ಲಿ ಪೋಸ್ಟ್ ಮಾಡಿರುವ ದಾಸ್, ವ್ಯಕ್ತಿಯ ಅನುಮತಿಯಿಲ್ಲದೆ ಅವರ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಕೃತ್ಯಕ್ಕೆ 'ನವ ಭಾರತ'ದಲ್ಲಿ ಕಾನೂನುಬದ್ಧ ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್ ಗೆ ತೆರಳಬೇಕಿದ್ದ ತಮ್ಮ ಪ್ರಯಾಣಕ್ಕೆ ಕೇಂದ್ರ ಸರ್ಕಾರ ಅಡ್ಡಿಪಡಿಸಿದೆ ಎಂದು ದಾಸ್ ಆರೋಪಿಸಿದ್ದಾರೆ. ಪ್ರಯಾಣಕ್ಕೆ ಕೇವಲ ಐದು ಗಂಟೆಗಳು ಬಾಕಿ ಇರುವಾಗ ಪಾಸ್ಪೋರ್ಟ್ ನಲ್ಲಿನ ವ್ಯತ್ಯಾಸಗಳ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಶೋಕಾಸ್ ನೋಟಿಸ್ ನೀಡಿತ್ತು ಎಂದು ಅವರು ಹೇಳಿದ್ದಾರೆ. ಈ ಕ್ರಮವನ್ನು ಪ್ರಶ್ನಿಸಿ ಸೋಮವಾರ ದಿಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ತಮ್ಮ ವಿರುದ್ಧ ನಿರಂತರವಾಗಿ ಉದ್ದೇಶಪೂರ್ವಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ದಾಸ್, ಈ ಹಿಂದೆ ತಮ್ಮ ದಿಲ್ಲಿ ನಿವಾಸದ ವಿಳಾಸವನ್ನೂ ಸೋರಿಕೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಬಳಿಕ ತಾವು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಕೆಲವು ಯೂಟ್ಯೂಬರ್ಗಳು ಮನೆಗೆ ನುಗ್ಗಿದ್ದರು ಎಂಬ ಆರೋಪವನ್ನೂ ಮಾಡಿದ್ದಾರೆ.
ತಮ್ಮ ಕುಟುಂಬ ಜೀವನದ ಬಗ್ಗೆ ಕಟ್ಟುಕಥೆಗಳನ್ನು ಹರಡಲಾಗಿತ್ತು, ತಮ್ಮ ಚಿತ್ರವನ್ನು ಮಾರ್ಫ್ ಮಾಡಿ ಪ್ರಸಾರ ಮಾಡಲಾಗಿತ್ತು. ಇದೀಗ ಮತ್ತೊಂದು ನಿರೂಪಣೆಯನ್ನು ಹರಡಲು ತಮ್ಮ ಪಾಸ್ಪೋರ್ಟ್ ವಿವರಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ತಮ್ಮ ವೈಯಕ್ತಿಕ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ದಾಸ್, ಬಾಡಿಗೆ ಒಪ್ಪಂದದ ದಾಖಲೆ ಸೋರಿಕೆಯಾಗದಂತೆ ನೋಡಿಕೊಳ್ಳಬೇಕೆಂದು SEM ನ್ಯಾಯಾಲಯಕ್ಕೆ ವಿಶೇಷವಾಗಿ ಮನವಿ ಮಾಡಿದ್ದಾಗಿ ಹೇಳಿದ್ದಾರೆ.
ಪಾಸ್ಪೋರ್ಟ್ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಪ್ರತಿಯೊಂದು ಖಾತೆಯ ವಿರುದ್ಧವೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಿಮಿನಲ್ ದೂರು ದಾಖಲಿಸುವುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನಿನ ಭಯವಿಲ್ಲದೆ ವರ್ತಿಸುತ್ತಿರುವುದನ್ನು ಶಾಶ್ವತ ರಕ್ಷಣೆ ಎಂದು ಭಾವಿಸಬಾರದು ಎಂದು ಹೇಳಿರುವ ಸೌರವ್ ದಾಸ್, ತಮ್ಮ ವಿರುದ್ಧ ನಡೆದ ಪ್ರತಿಯೊಂದು ಘಟನೆಯನ್ನೂ ಮತ್ತು ಅದರಲ್ಲಿ ಭಾಗಿಯಾಗಿರುವ ಪ್ರತಿಯೊಂದು ಸಾಮಾಜಿಕ ಜಾಲತಾಣ ಖಾತೆಯ ವಿವರಗಳನ್ನೂ ದಾಖಲಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಸೂಕ್ತ ಸಮಯ ಬಂದಾಗ ಸಂಬಂಧಪಟ್ಟವರು ಕಾನೂನಿನ ಸಂಪೂರ್ಣ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ. ಆಗ ದೇಶ ಬಿಟ್ಟು ಓಡಿಹೋಗುವುದೊಂದೇ ಅವರಿಗೆ ಉಳಿಯುವ ದಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.






