Assam - Arunachal Pradesh ಗಡಿಯಲ್ಲಿ ಪ್ರತಿಭಟನಾಕಾರರ ನಡುವೆ ಘರ್ಷಣೆ

Photo Credit : NDTV
ಗುವಾಹಟಿ, ಆ.13: ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಪ್ರತಿಭಟನಾಕಾರರ ನಡುವೆ ಗುರುವಾರ ಘರ್ಷಣೆ ಸಂಭವಿಸಿದ್ದು, ಈ ವೇಳೆ ತಮ್ಮ ಕಡೆಯಲ್ಲಿ ಗುಂಪನ್ನು ನಿಯಂತ್ರಿಸಲು ಅರುಣಾಚಲ ಪ್ರದೇಶ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಅಸ್ಸಾಮಿನ ಮಿಸಿಂಗ್ ಸಮುದಾಯದ ವಿದ್ಯಾರ್ಥಿ ಸಂಘಟನೆ ಮತ್ತು ಇತರ ಸ್ಥಳೀಯ ಗುಂಪುಗಳು ಅರುಣಾಚಲ ಪ್ರದೇಶದ ವಿರುದ್ಧ ಅನಿರ್ದಿಷ್ಟಾವಧಿ ಆರ್ಥಿಕ ದಿಗ್ಬಂಧನವನ್ನು ಆರಂಭಿಸಿದ ಮರುದಿನ ಅಸ್ಸಾಮಿನ ಧೇಮಾಜಿ ಜಿಲ್ಲೆಯಲ್ಲಿ ಈ ಘರ್ಷಣೆ ನಡೆದಿದೆ.
ಸೋಮವಾರ ಅರುಣಾಚಲ ಪ್ರದೇಶದವರೆನ್ನಲಾದ ದುಷ್ಕರ್ಮಿಗಳು ನಡೆಸಿದ್ದ ಗುಂಡಿನ ದಾಳಿಯಲ್ಲಿ ಅಸ್ಸಾಮಿನ 12 ಜನರು ಗಾಯಗೊಂಡಿದ್ದಕ್ಕೆ ಪ್ರತಿಯಾಗಿ ಈ ದಿಗ್ಬಂಧನವನ್ನು ಹೇರಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ತಿಳಿಸಿದೆ.
ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳು 804.1 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದ್ದು, 1,200 ವಿವಾದಾತ್ಮಕ ಪ್ರದೇಶಗಳನ್ನು ಹೊಂದಿವೆ. ಗಡಿ ವಿವಾದಗಳನ್ನು ಬಗೆಹರಿಸಲು ಎರಡೂ ರಾಜ್ಯಗಳು 12 ಪ್ರಾದೇಶಿಕ ಸಮಿತಿಗಳನ್ನು ರಚಿಸಿವೆ.






