ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ರನ್ನು ರಾವಣನಂತೆ ಚಿತ್ರಿಸಿದ ಆರೋಪ : ಜೆಎನ್ಯುನಲ್ಲಿ ಉದ್ವಿಗ್ನತೆ

Photo | ANI
ಹೊಸದಿಲ್ಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ದುರ್ಗಾ ವಿಗ್ರಹ ವಿಸರ್ಜನಾ ಮೆರವಣಿಗೆಯ ವೇಳೆ ಘರ್ಷಣೆಗಳು ನಡೆದು ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಯು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಮೇಲೆ "ಮೆರವಣಿಗೆಯ ಮೇಲೆ ಹಿಂಸಾತ್ಮಕ ದಾಳಿ" ನಡೆಸಿದ್ದಾರೆ ಎಂದು ಆರೋಪಿಸಿದೆ. ಆದರೆ ಎಡಪಂಥೀಯ ಸಂಘಟನೆಗಳು ಎಬಿವಿಪಿಯೇ "ಧಾರ್ಮಿಕ ಆಚರಣೆಯನ್ನು ರಾಜಕೀಯ ಪ್ರಚಾರಕ್ಕಾಗಿ ದುರುಪಯೋಗಪಡಿಸಿಕೊಂಡಿದೆ" ಎಂದು ಪ್ರತ್ಯಾರೋಪ ಮಾಡಿದೆ.
ಎಐಎಸ್ಎ, ಎಸ್ಎಫ್ಐ ಮತ್ತು ಡಿಎಸ್ಎಫ್ ಕಾರ್ಯಕರ್ತರು ಸಂಜೆ ಏಳು ಗಂಟೆ ಸುಮಾರಿಗೆ ಸಬರಮತಿ ಟಿ-ಪಾಯಿಂಟ್ ಬಳಿ ದುರ್ಗಾ ದೇವಿ ವಿಸರ್ಜನಾ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿ ನಿಂದನೆ ಮಾಡಿದ್ದಾರೆ ಎಂದು ಎಬಿವಿಪಿ ಆರೋಪ ಮಾಡಿದೆ. ಈ ವೇಳೆ ಹಲವಾರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ ಎಂದು ತಿಳಿಸಲಾಗಿದೆ.
“ದುರ್ಗಾ ವಿಸರ್ಜನೆಯಂತಹ ಪವಿತ್ರ ಆಚರಣೆಯ ಸಮಯದಲ್ಲಿ ನಡೆದ ಈ ದಾಳಿ ವಿಶ್ವವಿದ್ಯಾಲಯದ ಸಂಪ್ರದಾಯ ಮತ್ತು ವಿದ್ಯಾರ್ಥಿಗಳ ನಂಬಿಕೆಗಳ ಮೇಲಿನ ನೇರ ಆಕ್ರಮಣವಾಗಿದೆ. ಎಬಿವಿಪಿ ಇಂತಹ ಸಾಂಸ್ಕೃತಿಕ ದಾಳಿಯನ್ನು ಸಹಿಸುವುದಿಲ್ಲ” ಎಂದು ಎಬಿವಿಪಿ ಜೆಎನ್ಯು ಘಟಕದ ಅಧ್ಯಕ್ಷ ಮಾಯಾಂಕ್ ಪಾಂಚಲ್ ಘೋಷಿಸಿದ್ದಾರೆ.
ಜೆಎನ್ಯು ಎಬಿವಿಪಿ ಕಾರ್ಯಕರ್ತ ಪ್ರವೀಣ್ ಪಿಯೂಷ್ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಘಟನೆಯನ್ನು ಜೆಎನ್ಯು ವಿದ್ಯಾರ್ಥಿ ಒಕ್ಕೂಟ (ಜೆಎನ್ಯುಎಸ್ಯು) ಕೂಡ ಖಂಡಿಸಿದ್ದು, ಜಂಟಿ ಕಾರ್ಯದರ್ಶಿ ವೈಭವ್ ಮೀನಾ, “ಇದು ವಿಶ್ವವಿದ್ಯಾಲಯದ ಸಾಂಸ್ಕೃತಿಕ ಸಾಮರಸ್ಯದ ಮೇಲಿನ ನೇರ ದಾಳಿ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಎಡಪಂಥೀಯ ಅಖಿಲ ಭಾರತ ವಿದ್ಯಾರ್ಥಿ ಸಂಘ(ಎಐಎಸ್ಎ)ವು ಎಬಿವಿಪಿಯ ಆರೋಪಗಳನ್ನು ತಳ್ಳಿ ಹಾಕಿದೆ. ವಿವಾದಕ್ಕೆ ಮೂಲವೇ ಎಬಿವಿಪಿ ಆಯೋಜಿಸಿದ್ದ ರಾವಣ ದಹನ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಸಿಎಎ ವಿರೋಧಿ ಹೋರಾಟ ಹಾಗೂ ದಿಲ್ಲಿ ಗಲಭೆ ಪ್ರಕರಣಗಳಲ್ಲಿ ಆರೋಪಿಗಳಾದ ಜೆಎನ್ಯುನ ಹಿಂದಿನ ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ರನ್ನು ರಾವಣನಂತೆ ಚಿತ್ರಿಸಲಾಗಿದೆ ಎಂದು ಆರೋಪಿಸಿದೆ.
ಎಐಎಸ್ಎ ಹೇಳಿಕೆಯಲ್ಲಿ, “ಇದು ಸ್ಪಷ್ಟವಾದ ಇಸ್ಲಾಮೋಫೋಬಿಯಾದ ಉದಾಹರಣೆ. ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ನಾಥೂರಾಮ್ ಗೋಡ್ಸೆ, ಗುರ್ಮೀತ್ ರಾಮ್ ರಹೀಮ್ ಸಿಂಗ್ ಅಥವಾ 2020ರ ದಿಲ್ಲಿ ಗಲಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದವರನ್ನು ಏಕೆ ಇದಕ್ಕೆ ಆರಿಸಲಿಲ್ಲ?” ಎಂದು ಪ್ರಶ್ನಿಸಿದೆ.
“ಜೆಎನ್ಯು ದ್ವೇಷ ಮತ್ತು ಇಸ್ಲಾಮೋಫೋಬಿಯಾದ ರಾಜಕೀಯವನ್ನು ತಿರಸ್ಕರಿಸುತ್ತದೆ. ವಿದ್ಯಾರ್ಥಿಗಳು ಆರೆಸ್ಸೆಸ್-ಎಬಿವಿಪಿಯ ವಿಭಜಕ ರಾಜಕೀಯದ ವಿರುದ್ಧ ಎದ್ದು ನಿಲ್ಲಬೇಕು” ಎಂದು ಸಂಘಟನೆ ಕರೆ ನೀಡಿದೆ.







