ಓದಿನ ಕಡೆ ಗಮನ ಕೊಡದಿದ್ದಕ್ಕೆ ತಾಯಿಯಿಂದ ಹಲ್ಲೆ: 6ನೇ ತರಗತಿಯ ಬಾಲಕಿ ಮೃತ್ಯು

ಹೌರಾ: ಓದಿನ ಕಡೆ ಗಮನ ಕೊಡುವಂತೆ ಮಾಡಲು ಆರನೆ ತರಗತಿಯ ಬಾಲಕಿಯನ್ನು ಆಕೆಯ ತಾಯಿ ಥಳಿಸಿದ್ದರಿಂದ, ಆಕೆ ಮೃತಪಟ್ಟಿರುವ ಘಟನೆ ಶುಕ್ರವಾರ ಬೇಲೂರ್ ಟಿಫಿನ್ ಬಝಾರ್‌ನಲ್ಲಿರುವ ವಸತಿ ಸಂಕೀರ್ಣವೊಂದರಲ್ಲಿ ನಡೆದಿದೆ. ಮೃತ ಬಾಲಕಿಯು ಲಿಲುವಾಹ್‌ನಲ್ಲಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ವರದಿಯಾಗಿದೆ.
ಓದಿಗೆ ಸಂಬಂಧಿಸಿದಂತೆ ಮೃತ ಬಾಲಕಿ ಅನನ್ಯ ಶ್ರೀಶಮ್ ಹಾಗೂ ಆಕೆಯ ತಾಯಿಯೊಂದಿಗೆ ವಾಗ್ವಾದವೇರ್ಪಟ್ಟು, ತಾಯಿಯು ಆಕೆಯನ್ನು ಥಳಿಸುವಾಗ, ಆಕೆ ನೆರವಿಗಾಗಿ ಮೊರೆ ಇಡುತ್ತಿದ್ದಳು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಈ ಘಟನೆ ನಡೆದ ಸಂದರ್ಭದಲ್ಲಿ ರೈಲ್ವೆ ಉದ್ಯೋಗಿಯಾಗಿರುವ ಮೃತ ಬಾಲಕಿಯ ತಂದೆಯು ಮನೆಯಲ್ಲಿರಲಿಲ್ಲ ಎಂದು ಹೇಳಲಾಗಿದೆ. ಮೃತ ಬಾಲಕಿ ಹಾಗೂ ಆಕೆಯ ತಾಯಿಯ ನಡುವಿನ ಗದ್ದಲ ಕೇಳಿ ನೆರೆಹೊರೆಯವರು ಅವರ ಫ್ಲ್ಯಾಟ್‌ಗೆ ಧಾವಿಸಿದಾಗ, ಬಾಲಕಿಯು ಪ್ರಜ್ಞಾಹೀನವಾಗಿ ಆಕೆಯ ತಾಯಿಯ ಬಳಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಲಿಲುವಾಹ್ ರೈಲ್ ಅಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಪೊಲೀಸರು ಈ ಸಂಬಂಧ ಅಸಹಜ ಸಾವು ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.







