ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ನಿಕಟವರ್ತಿ ಗುಂಡಿನ ದಾಳಿಯಲ್ಲಿ ಮೃತ್ಯು

Photo: twitter.com/KirkLubimov
ಹೊಸದಿಲ್ಲಿ: ಕೆನಡಾ ಹಾಗೂ ಭಾರತದ ನಡುವೆ ರಾಜತಾಂತ್ರಿಕ ಸಂಘರ್ಷ ನಡೆಯುತ್ತಿರುವ ನಡುವೆಯೇ ಮೃತ ಖಾಲಿಸ್ತಾನದ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಸಹವರ್ತಿ, ಸುಖದೂಲ್ ಸಿಂಗ್ ಅಲಿಯಾಸ್ ಸುಖ ದುನೇಕೆ ಬುಧವಾರ ಕೆನಡಾದಲ್ಲಿ ಅಪರಿಚಿತ ಬಂದೂಕುಧಾರಿ ನಡೆಸಿದ ಗುಂಡಿನ ದಾಳಿಯಲ್ಲಿ ಹತನಾಗಿದ್ದಾನೆ.
ಪಂಜಾಬ್ ಮೊಗಾ ಮೂಲದವನಾದ ದುನೇಕೆ ಮೇಲೆ ವಿನ್ನಿಪೆಗ್ ನಗರದಲ್ಲಿ ನಡೆದ ದಾಳಿಯಲ್ಲಿ ಆತನ ಎದುರಾಳಿಗಳು ಪಾಯಿಂಟ್ ಬ್ಲಾಂಕ್ ರೇಂಜ್ ನಿಂದ ಒಂಬತ್ತು ಸುತ್ತು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.
ದುನೇಕೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬುಧವಾರ ಬಿಡುಗಡೆ ಮಾಡಿದ ಅತ್ಯಪೇಕ್ಷಿತ ಆರೋಪಿಗಳ ಪಟ್ಟಿಯಲ್ಲಿ ಸೇರಿದ್ದ. 2017ರಲ್ಲಿ ನಕಲಿ ಪಾಸ್ಪೋರ್ಟ್ ನಲ್ಲಿ ಆತ ಕೆನಡಾಗೆ ಪಲಾಯನ ಮಾಡಿದ್ದ. ಕೆನಡಾ ಸಂಪರ್ಕ ಹೊಂದಿದ ಉಗ್ರಗಾಮಿಗಳು ಮತ್ತು ಗ್ಯಾಂಗ್ಸ್ಟರ್ ಗಳ ಜಾಲದ ಸದಸ್ಯನಾಗಿದ್ದ ಎಂದು ತಿಳಿದು ಬಂದಿದೆ.
ಈತ ಪಂಜಾಬ್ ನ ಬಾಂಭಿಹಾ ಗ್ಯಾಂಗ್ ನ ಸದಸ್ಯನಾಗಿದ್ದ ಈತ ಆ ಬಳಿಕ ಅರ್ಷ್ ದಲ್ಲಾ ಅವರ ಜತೆ ಕೈಜೋಡಿಸಿ ಕೆಟಿಎಫ್ ಮುಖ್ಯಸ್ಥ ನಿಜ್ಜರ್ ಪರ ಕೆಲಸ ಮಾಡುತ್ತಿದ್ದ. ದೆಹಲಿಯಲ್ಲಿ ಹಿಂದೂ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲು ಇಬ್ಬರು ಅಪರಾಧಿಗಳನ್ನು ಬಾಡಿಗೆಗೆ ಪಡೆದ ಪ್ರಕರಣದಲ್ಲಿ ಇಬ್ಬರನ್ನೂ ಕುಖ್ಯಾತ ಉಗ್ರ ಪಟ್ಟಿಗೆ ಸೇರಿಸಲಾಗಿತ್ತು.
ಸೆಪ್ಟೆಂಬರ್ 20ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ವಿನ್ನಿಪೆಗ್ ಪೊಲೀಸ್ ಸೇವಾ ವಿಭಾಗದವರು ನಾರ್ತ್ ಇಂಕ್ಸ್ಟರ್ ಕೈಗಾರಿಕಾ ಪ್ರದೇಶದಲ್ಲಿ ನಡೆದ ದಾಳಿ ಘಟನೆಗೆ ಸ್ಪಂದಿಸಿ ಸ್ಥಳಕ್ಕೆ ಧಾವಿಸಿ, ಹಸೆಲ್ಟಾನ್ ಡ್ರೈವ್ ಎಂಬಲ್ಲಿ ಮನೆಯೊಂದಕ್ಕೆ ಭೇಟಿ ನೀಡಿ ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಟಾಪ್ಸಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಸಂಬಂಧ ಯಾರನ್ನೂ ಬಂಧಿಸಿಲ್ಲ ಎಂದು ಕೆನಡಾ ಪೊಲೀಸ್ ಇಲಾಖೆ ಹೇಳಿಕೆ ನೀಡಿದೆ.







