‘ಮೋದಿ ಸರ್ಕಾರದ ನೀತಿಯನ್ನೇ ಬೆಂಬಲಿಸಿದಂತಿದೆ’: ಇಸ್ರೇಲ್ ವಿಚಾರದಲ್ಲಿ ರಾಹುಲ್ ಗಾಂಧಿ ವಿರುದ್ಧ AIMPLB ವಕ್ತಾರರಿಂದ ಟೀಕೆ

ಸೈಯದ್ ಖಾಸಿಮ್ ರಸೂಲ್ ಇಲ್ಯಾಸ್, PC : JIH | ರಾಹುಲ್ ಗಾಂಧಿ, PC : PTI
ಹೊಸದಿಲ್ಲಿ: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ‘ನರಮೇಧ’ ಎಂದು ಕರೆಯದ ರಾಹುಲ್ ಗಾಂಧಿಯವರ ನಿಲುವನ್ನು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (AIMPLB) ವಕ್ತಾರ ಸೈಯದ್ ಖಾಸಿಮ್ ರಸೂಲ್ ಇಲ್ಯಾಸ್ ಟೀಕಿಸಿದ್ದಾರೆ. ಇಸ್ರೇಲ್ ಜೊತೆ ಬಲವಾದ ಕಾರ್ಯತಂತ್ರದ ಸಂಬಂಧ ಹೊಂದಬೇಕು ಎಂಬ ರಾಹುಲ್ ಗಾಂಧಿಯವರ ಹೇಳಿಕೆಯು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿಗೆ ಹತ್ತಿರವಾಗಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಇಲ್ಯಾಸ್, ಹಮಾಸ್ ಮತ್ತು ಇಸ್ರೇಲ್ ಎರಡನ್ನೂ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಆದರೆ, ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ‘ನರಮೇಧ’ ಎಂದು ಏಕೆ ಕರೆದಿಲ್ಲ ಎಂದು ಪ್ರಶ್ನಿಸಿದ್ದಾರೆ.
‘ಈ ಪದ ಬಳಸದಿರುವುದು ಆಕಸ್ಮಿಕವಲ್ಲ; ಉದ್ದೇಶಪೂರ್ವಕ ಮೌನದಂತೆ ಕಾಣುತ್ತದೆ.ಇಂತಹ ನಿಲುವು ತಪ್ಪು ಮತ್ತು ಸ್ವೀಕಾರಾರ್ಹವಲ್ಲ. ‘ಇಸ್ರೇಲ್ ಕುರಿತ ರಾಹುಲ್ ಗಾಂಧಿಯವರ ಹೇಳಿಕೆ ಮೋದಿ ಸರ್ಕಾರದ ನೀತಿಗೆ ಬಹಳ ಹತ್ತಿರವಾಗಿದೆ’ ಎಂದು ಅವರು ಟೀಕಿಸಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆಗಳಿಗಾಗಿ ಜಾಗತಿಕ ಮಟ್ಟದಲ್ಲಿ ಟೀಕೆ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ, ಅದರೊಂದಿಗೆ ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಮಾತನಾಡಿರುವುದು ಆಘಾತಕಾರಿ ಎಂದು ಇಲ್ಯಾಸ್ ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಗಾಂಧಿಯವರ ನಿಲುವು ಗಂಭೀರ ಸೈದ್ಧಾಂತಿಕ ಲೋಪವಾಗಿದ್ದು, ಕಾಂಗ್ರೆಸ್ ನಾಯಕರಿಂದ ನಿರೀಕ್ಷಿಸಲಾಗುವ ರಾಜಕೀಯ ನಿಲುವಿಗೆ ವಿರುದ್ಧವಾಗಿದೆ ಎಂದೂ ಹೇಳಿದ್ದಾರೆ.
ನ. 18ರಂದು ಚಿಕಾಗೋ ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನಿ ಪ್ರೊ. ರಾಬರ್ಟ್ ಪೇಪ್ ಅವರೊಂದಿಗೆ ‘ಇರಾನ್ ಯುದ್ಧ ಮತ್ತು ಜಗತ್ತಿನಲ್ಲಿ ಭಾರತದ ಪಾತ್ರ’ ಕುರಿತು ನಡೆದ ಚರ್ಚೆಯಲ್ಲಿ ರಾಹುಲ್ ಗಾಂಧಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇಸ್ರೇಲ್ ಜೊತೆಗಿನ ಭಾರತದ ಸಂಬಂಧದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಅವರು, ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳ ದೃಷ್ಟಿಯಿಂದ ಇಸ್ರೇಲ್ ಜೊತೆ ರಕ್ಷಣಾ ಸಹಕಾರ ಮತ್ತು ಶಸ್ತ್ರಾಸ್ತ್ರ ಖರೀದಿ ಸೇರಿದಂತೆ ಬಲವಾದ ಸಂಬಂಧ ಹೊಂದಿರಬೇಕು ಎಂದು ಹೇಳಿದ್ದರು. ಆದರೆ, ಇಸ್ರೇಲ್ ಜೊತೆ ಸಂಬಂಧವಿದ್ದರೂ ಗಾಝಾದಲ್ಲಿ ಅದರ ಕ್ರಮಗಳನ್ನು ಭಾರತ ಟೀಕಿಸಬೇಕು ಎಂದಿದ್ದರು.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯನ್ನು ರಾಹುಲ್ ಗಾಂಧಿ ಖಂಡಿಸಿದ್ದರು. ಅದೇ ವೇಳೆ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಗಳನ್ನೂ ಟೀಕಿಸಿದ್ದರು. ಒಂದು ಹಿಂಸಾತ್ಮಕ ಕೃತ್ಯವು ಮತ್ತೊಂದು ಹಿಂಸಾತ್ಮಕ ಕೃತ್ಯವನ್ನು ಸಮರ್ಥಿಸುವುದಿಲ್ಲ ಎಂದು ಹೇಳಿದ್ದರು.
ನ. 19ರಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, ಭಾರತದ ವಿದೇಶಾಂಗ ನೀತಿಯು ರಾಷ್ಟ್ರೀಯ ಹಿತಾಸಕ್ತಿಗಳನ್ನು ಆಧರಿಸಿರಬೇಕು ಎಂದು ಪುನರುಚ್ಚರಿಸಿದ್ದರು. ಇಸ್ರೇಲ್ ಜೊತೆ ಬಲವಾದ ಸಂಬಂಧ ಹೊಂದಬೇಕು, ಆದರೆ ಗಾಝಾ ವಿಚಾರದಲ್ಲಿ ಮೌನವಾಗಿರಬಾರದು ಎಂಬುದು ಅವರ ನಿಲುವು ಎಂದು ಹೇಳಿದ್ದರು.
ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಹಲವು ರಾಜಕೀಯ ನಾಯಕರು ಮತ್ತು ಕಾರ್ಯಕರ್ತರು ಟೀಕೆ ವ್ಯಕ್ತಪಡಿಸಿದ್ದಾರೆ. ಫೆಲೆಸ್ತೀನ್ ವಿಚಾರದಲ್ಲಿ ಅವರು ದ್ವಿಮುಖ ನಿಲುವು ಹೊಂದಿದ್ದಾರೆ ಎಂದು ಆರೋಪಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇಸ್ರೇಲ್ ಜೊತೆಗಿನ ಸಂಬಂಧ ಬಲಪಡಿಸುವುದಕ್ಕೆ ರಾಹುಲ್ ಗಾಂಧಿ ನೀಡಿರುವ ಬೆಂಬಲವು ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ನಿಲುವನ್ನೇ ದುರ್ಬಲಗೊಳಿಸಿದೆ ಎಂದು ಹೇಳಿದ್ದಾರೆ.






