ಯೋಗ ಮಾಡಲು ಪ್ರಯಾಸಪಡುತ್ತಿರುವ ಸಿಎಂ ಆದಿತ್ಯನಾಥರನ್ನು ಕಿಚಾಯಿಸಿದ ಅಖಿಲೇಶ್ ಯಾದವ್ ಹೇಳಿದ್ದೇನು?
ಲಕ್ನೊ: ಯೋಗಾಸನ ಪ್ರದರ್ಶಿಸಲು ಪ್ರಯಾಸ ಪಡುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿಡಿಯೊವನ್ನು ಶುಕ್ರವಾರ ಟ್ವೀಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಆ ವಿಡಿಯೊಗೆ 'ಯೋಗ ಆನಂದಿಸಿ' ಎಂಬ ಶೀರ್ಷಿಕೆ ನೀಡಿ ಯೋಗಿ ಆದಿತ್ಯನಾಥರನ್ನು ಕಿಚಾಯಿಸಿದ್ದಾರೆ ಎಂದು freepressjournal.in ವರದಿ ಮಾಡಿದೆ.
ಜೂನ್ 21ರಂದು ಗೋರಖ್ಪುರದಲ್ಲಿ ಆಯೋಜಿಸಲಾಗಿದ್ದ ಯೋಗ ಅವಧಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಅವರು ಯೋಗದ ಆಸನವೊಂದನ್ನು ಪ್ರದರ್ಶಿಸಲು ಪ್ರಯಾಸ ಪಟ್ಟಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಲೇವಡಿಗೆ ಗುರಿಯಾಗಿತ್ತು. ಅದೇ ವಿಡಿಯೊವನ್ನು ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಆ ವಿಡಿಯೊಗೆ "ಯೋಗವನ್ನು ಆನಂದಿಸಿ" ಎಂಬ ಶೀರ್ಷಿಕೆ ನೀಡಿ ಪರೋಕ್ಷವಾಗಿ ಯೋಗಿ ಆದಿತ್ಯನಾಥರನ್ನು ಕಿಚಾಯಿಸಿದ್ದಾರೆ.
2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಭಾಷಣದ ಸಂದರ್ಭದಲ್ಲಿ ಮೊತ್ತಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಅಂದಿನಿಂದ ಬಾಗುವಿಕೆ, ಸಾಮರ್ಥ್ಯ, ಸಮತೋಲನ ಹಾಗೂ ಒಟ್ಟಾರೆ ದೇಹಾರೋಗ್ಯವನ್ನು ಸುಧಾರಿಸಿಕೊಳ್ಳಲು ಸಹಕಾರಿಯಾಗಿರುವ ಯೋಗವು ವಿಶ್ವಾದ್ಯಂತ ಭಾರಿ ಜನಪ್ರಿಯತೆ ಪಡೆದುಕೊಂಡಿದೆ.