"ನಾವು ಬಿಜೆಪಿ ವಿರುದ್ಧ ಮಾತ್ರವಲ್ಲ, ಚುನಾವಣಾ ಆಯೋಗದ ವಿರುದ್ಧವೂ ಹೋರಾಡಿದೆವು": ಮಮತಾ ಬ್ಯಾನರ್ಜಿ ಆಕ್ರೋಶ

Screengrab:X/@AITCofficial
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸೋಲಿನ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಅವರು ಆರೋಪಿಸಿದ್ದಾರೆ.
“ನಾವು ಬಿಜೆಪಿ ವಿರುದ್ಧ ಮಾತ್ರ ಹೋರಾಡಲಿಲ್ಲ. ಆ ಪಕ್ಷಕ್ಕೆ ಅನುಕೂಲವಾಗುವಂತೆ ಕೆಲಸ ಮಾಡಿದ ಚುನಾವಣಾ ಆಯೋಗದ ವಿರುದ್ಧವೂ ಹೋರಾಡಿದೆವು. ಇಡೀ ವ್ಯವಸ್ಥೆಯೇ ನಮ್ಮ ವಿರುದ್ಧ ಇತ್ತು. ಪ್ರಧಾನಿ ಮತ್ತು ಗೃಹ ಸಚಿವರು ನೇರವಾಗಿ ಹಸ್ತಕ್ಷೇಪ ಮಾಡಿದ್ದಾರೆ,” ಎಂದು ಅವರು ಹೇಳಿದ್ದಾರೆ.
ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಅವರು, “ಸುಮಾರು 90 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ. ನ್ಯಾಯಾಲಯದ ಕದ ತಟ್ಟಿದ ಬಳಿಕ 32 ಲಕ್ಷ ಹೆಸರುಗಳನ್ನು ವಾಪಸ್ ಸೇರಿಸಲಾಯಿತು. ಆದರೆ ಇನ್ನೂ ಸುಮಾರು ಏಳು ಲಕ್ಷ ಹೆಸರುಗಳನ್ನು ನಂತರ ಸೇರಿಸಲಾಗಿದೆ. ಇದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇದು ಚುನಾವಣೆಯಲ್ಲಿ ನಡೆದ ಅಸಹ್ಯ ಹಾಗೂ ಕುತಂತ್ರದ ಆಟವನ್ನು ತೋರಿಸುತ್ತದೆ,” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಫಲಿತಾಂಶಗಳನ್ನು ಪ್ರಶ್ನಿಸಿದ ಅವರು, “ನಾವು ಸೋತಿಲ್ಲ; ಸುಮಾರು 100 ಸ್ಥಾನಗಳನ್ನು ಬಲವಂತವಾಗಿ ಕಸಿದುಕೊಂಡಿದ್ದಾರೆ,” ಎಂದು ದೂರಿದರು.
ಇವಿಎಂ ಬಳಕೆಯ ಮೇಲೂ ಅನುಮಾನ ವ್ಯಕ್ತಪಡಿಸಿದ ಅವರು, “ಮತದಾನದ ನಂತರವೂ ಇವಿಎಂಗಳು 80–90% ಚಾರ್ಜ್ ಉಳಿಸಿಕೊಂಡಿದ್ದವು. ಇದು ಹೇಗೆ ಸಾಧ್ಯ? ಚುನಾವಣೆಗೆ ಮುನ್ನ ನಮ್ಮ ಕಾರ್ಯಕರ್ತರನ್ನು ಬಂಧಿಸಿ ದಾಳಿ ನಡೆಸಿದರು. ಐಪಿಎಸ್, ಐಎಎಸ್ ಅಧಿಕಾರಿಗಳನ್ನು ಬದಲಾಯಿಸಿ ತಮ್ಮವರನ್ನು ನೇಮಕ ಮಾಡಿದರು. ಚುನಾವಣಾ ಆಯೋಗ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಇದ್ದಂತಿದೆ,” ಎಂದು ಆರೋಪಿಸಿದರು.
“ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಸಿದುಕೊಳ್ಳಲು, ಇವಿಎಂಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಚುನಾವಣೆಯಲ್ಲಿ ಸಿಇಸಿ ಖಳನಾಯಕನಂತೆ ವರ್ತಿಸಿದ್ದಾರೆ. ನನ್ನ ಜೀವನದಲ್ಲಿ ಇಂತಹ ಚುನಾವಣೆಯನ್ನು ನೋಡಿಲ್ಲ,” ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದರು.






