ರಾಹುಲ್ ಗಾಂಧಿಗೆ ಧಿಕ್ಕಾರ ಕೂಗುವ ಭರದಲ್ಲಿ ನಡ್ಡಾಗೆ ಮುರ್ದಾಬಾದ್ ಎಂದ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್!: ವೈರಲ್ ಆದ ಎಡವಟ್ಟಿನ ಘಟನೆ

ಮೋಹನ್ ಯಾದವ್ (Photo: PTI)
ಇಂದೋರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಲು ಮುಂದಾದ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ತಮ್ಮದೇ ಪಕ್ಷದ ನಾಯಕ ಜೆ.ಪಿ. ನಡ್ಡಾ ಅವರಿಗೆ ಮುರ್ದಾಬಾದ್ ಎಂದು ಕೂಗಿ ಮುಜುಗರಕ್ಕೀಡಾಗಿದ್ದಾರೆ. ಈ ಯಡವಟ್ಟಿನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೋಹನ್ ಯಾದವ್ ವ್ಯಾಪಕ ಟೀಕೆ ಮತ್ತು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
ಮೈಕ್ ಹಿಡಿದು ಜಿಂದಾಬಾದ್, ಮುರ್ದಾಬಾದ್ ಘೋಷಣೆ ಕೂಗುತ್ತಿದ್ದ ಮುಖ್ಯಮಂತ್ರಿಯ ಹಿಂದೆ ನಿಂತಿದ್ದ ಭದ್ರತಾ ಸಿಬ್ಬಂದಿಯ ಮುಖದಲ್ಲಿ ಮುಜುಗರ ಎದ್ದು ಕಾಣುತ್ತಿತ್ತು. ‘ಛೆ, ಎಂಥಾ ಯಡವಟ್ಟು ಮಾಡಿಬಿಟ್ಟಿರಿ ಮುಖ್ಯಮಂತ್ರಿಗಳೇ’ ಎನ್ನುವಂತಿತ್ತು ಅವರ ಮುಖಭಾವ. ರಾಹುಲ್ ಗಾಂಧಿ ವಿರುದ್ಧ ಧಿಕ್ಕಾರ ಕೂಗುವ ಭರದಲ್ಲಿ ಮೋಹನ್ ಯಾದವ್ ತಮ್ಮದೇ ಪಕ್ಷದ ನಾಯಕ ನಡ್ಡಾ ಅವರಿಗೆ ಧಿಕ್ಕಾರ ಕೂಗಿದ್ದಾರೆ. ಅಷ್ಟೇ ಅಲ್ಲ, ಸ್ವತಃ ನಡ್ಡಾ ವೇದಿಕೆಯಲ್ಲಿದ್ದಾಗಲೇ ಅವರ ಕಿವಿಗೂ ಮುರ್ದಾಬಾದ್ ಘೋಷಣೆ ಅಪ್ಪಳಿಸಿದೆ.
ನಾಲಿಗೆ ತಪ್ಪಿನಿಂದ ಈ ಪ್ರಮಾದ ನಡೆದಿದ್ದರೂ, ಬಿಜೆಪಿಯವರು ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುತ್ತಿರುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. ತಮ್ಮನ್ನು ತಾವೇ ಅಪಹಾಸ್ಯಕ್ಕೆ ಗುರಿಪಡಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರ ಪ್ರಮಾದಗಳನ್ನು ವಿರೋಧ ಪಕ್ಷದವರು ಆನಂದಿಸುತ್ತಿದ್ದಾರೆ. ಬಿಜೆಪಿ ರ್ಯಾಲಿಯ ಉತ್ಸಾಹವನ್ನೇ ನುಂಗಿಹಾಕಿರುವ ಈ ವೀಡಿಯೊ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ.
ತಮ್ಮ ನಾಯಕರನ್ನು ಮೆಚ್ಚಿಸಲು ಹೋಗಿ ಹಾಸ್ಯಾಸ್ಪದವಾಗುವವರು ಬಿಜೆಪಿಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಇದಕ್ಕೆ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರೇ ಉದಾಹರಣೆ. ದೇಶದ ಕಾನೂನು ಸಚಿವರಾಗಿರುವ ಅವರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ಬದಲು ಹಾರ್ಮೋನಿಯಂ ನುಡಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಅವರ ಗುಣಗಾನದಲ್ಲಿ ತೊಡಗಿದ್ದಾರೆ. ‘ಕಹೀಂ ನಹೀಂ ಜಾಯೇಂಗೇ ಮೋದಿ’ ಎಂದು ಹಾಡುತ್ತಾ ಪ್ರಧಾನಿಯನ್ನು ಮೆಚ್ಚಿಸುವುದರಲ್ಲೇ ಮೇಘವಾಲ್ ಅವರ ಕಾನೂನು ಸಚಿವ ಸ್ಥಾನದ ಜವಾಬ್ದಾರಿ ವ್ಯರ್ಥವಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಈಗ ರಾಹುಲ್ ಗಾಂಧಿ ಇದೇ ಹಾಡನ್ನು ತಮ್ಮ ರೀಲ್ ನಲ್ಲಿ ಬಳಸಿಕೊಂಡು ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಮೋದಿ ಎಲ್ಲಿಗೂ ಹೋಗುವುದಿಲ್ಲ, ಬದಲಿಗೆ ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರುತ್ತಾರೆ ಎಂಬರ್ಥದಲ್ಲಿ ಅವರು ತಿರುಗೇಟು ನೀಡಿದ್ದಾರೆ.
ಬಿಜೆಪಿ ನಾಯಕರು ನಿಜವಾಗಿಯೂ ಮಾಡಬೇಕಾದ ಕೆಲಸಗಳನ್ನು ಬಿಟ್ಟು ತಮ್ಮ ನಾಯಕರನ್ನು ಮೆಚ್ಚಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ ಬಹಿರಂಗ ಚರ್ಚೆಯ ವಿಚಾರವನ್ನು ದೊಡ್ಡ ವಿಷಯವನ್ನಾಗಿಸಲು ಪಟ್ಟು ಹಿಡಿದಿದ್ದಾರೆ. ಆದರೆ, ಕಳೆದ 12 ವರ್ಷಗಳಿಂದ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸದ ಮೋದಿ ಬಹಿರಂಗ ಚರ್ಚೆಗೆ ಬರುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ.
ಸ್ಕ್ರಿಪ್ಟ್ ಇಲ್ಲದೆ ಮಾತನಾಡಲು ಸಾಧ್ಯವಾಗದ ಪ್ರಧಾನಿಯಿರುವ ದೇಶದಲ್ಲಿ ಮುಕ್ತ ಚರ್ಚೆ ನಡೆಯಲು ಸಾಧ್ಯವೇ? ಮೋದಿ ಚರ್ಚೆಗಳಿಂದ ದೂರ ಉಳಿಯುತ್ತಾರೆ. ವಿರೋಧ ಪಕ್ಷದವರನ್ನು ದೇಶದ್ರೋಹಿಗಳೆಂದು ಕರೆಯುತ್ತಾರೆ. ವಿದೇಶಿ ಪಿತೂರಿಯ ಆರೋಪಗಳನ್ನೂ ಮಾಡುತ್ತಾರೆ. ಆದರೆ, ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಆಹ್ವಾನಿಸಿದಾಗ ಮಾತ್ರ ಮುಂದೆ ಬರುವುದಿಲ್ಲ ಎಂಬುದು ವಿರೋಧ ಪಕ್ಷಗಳ ಟೀಕೆ.
SIR ವಿರುದ್ಧದ ಪ್ರತಿಭಟನೆ ಸುತ್ತ ರಾಜಕೀಯ ಜಟಾಪಟಿ
ಈ ಎಲ್ಲ ಬೆಳವಣಿಗೆಗಳ ಆರಂಭವಾಗಿದ್ದು SIR ವಿರುದ್ಧದ ಪ್ರತಿಭಟನೆಗಳಿಂದ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿದರೂ ಅವರು ರಾಜೀನಾಮೆ ನೀಡಿಲ್ಲ. ಈ ಸಂದರ್ಭದಲ್ಲಿ ಜ್ಞಾನೇಶ್ ಕುಮಾರ್ ಮೌನಕ್ಕೆ ಶರಣಾಗಿದ್ದರೆ, ಬಿಜೆಪಿ ನಾಯಕರು ಮುಂಚೂಣಿಗೆ ಬಂದು ಅವರ ಪರವಾಗಿ ಸಮರ್ಥನೆ ನೀಡುತ್ತಿರುವುದು ವಿಚಿತ್ರವಾಗಿದೆ.
ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯನ್ನು ಮೋದಿ ಸರಕಾರವನ್ನು ಉರುಳಿಸುವ ಪಿತೂರಿ ಎಂದು ಬಿಜೆಪಿ ನಾಯಕರು ಬಣ್ಣಿಸುತ್ತಿರುವುದು ಮತ್ತಷ್ಟು ಹಾಸ್ಯಾಸ್ಪದವಾಗಿದೆ. ಪ್ರತಿಭಟನೆಗಳನ್ನು ಅರಾಜಕತೆ ಎಂದು ಕರೆಯುತ್ತಿರುವ ಬಿಜೆಪಿ, ಅದನ್ನು ವಿರೋಧಿಸಿ ರ್ಯಾಲಿಗಳನ್ನು ನಡೆಸುತ್ತಿದೆ. ಬಿಜೆಪಿ ಅಧಿಕಾರದಲ್ಲಿರುವ ಪ್ರತಿಯೊಂದು ರಾಜ್ಯದಲ್ಲೂ ಮೆರವಣಿಗೆಗಳನ್ನು ಆಯೋಜಿಸಲಾಗುತ್ತಿದೆ.
ಈ ನಡುವೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿಲ್ಲ. ಆದರೆ, ಚುನಾವಣಾ ಆಯೋಗ ಇತ್ತೀಚೆಗೆ ತೆಗೆದುಕೊಂಡಿದ್ದ ಹಲವು ನಿರ್ಧಾರಗಳನ್ನು ಹಿಂಪಡೆಯಲಾಗುತ್ತಿದೆ. ತನ್ನ ನಿರ್ಧಾರಗಳಲ್ಲಿ ತಪ್ಪಾಗಿರುವುದನ್ನು ಆಯೋಗವೇ ಒಪ್ಪಿಕೊಳ್ಳುತ್ತಿರುವ ಬೆಳವಣಿಗೆಗಳೂ ನಡೆದಿವೆ. ಆದರೂ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿಲ್ಲ. ಅವರ ಬೆಂಬಲಕ್ಕೆ ಬಿಜೆಪಿ ನಾಯಕರು ನಿಂತಿದ್ದಾರೆ.
ವಿರೋಧ ಪಕ್ಷಗಳು ಪ್ರಜಾಸತ್ತಾತ್ಮಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರೆ ಅದನ್ನು ಅರಾಜಕತೆ ಎಂದು ಬಿಂಬಿಸಿ ರ್ಯಾಲಿ ನಡೆಸುತ್ತಿರುವ ಬಿಜೆಪಿ, ದೇಶದ ನೈಜ ಸಮಸ್ಯೆಗಳನ್ನು ಬದಿಗೊತ್ತುತ್ತಿದೆ. ಇಲ್ಲವೇ ಆ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಜನರ ಸಮಸ್ಯೆಗಳಿಗೆ ಪರಿಹಾರವಿಲ್ಲ
ದೇಶದ ಇತರ ಸಮಸ್ಯೆಗಳು ಮಾತ್ರ ಹಾಗೆಯೇ ಉಳಿದಿವೆ. ಹಣದುಬ್ಬರ ಉತ್ತುಂಗದಲ್ಲಿದೆ. ಸಾಮಾನ್ಯ ಜನರು ಎದುರಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಸಿಕ್ಕಿಲ್ಲ. SIRಗೆ ಸಂಬಂಧಿಸಿದ ಸಮಸ್ಯೆಗಳೂ ಮುಂದುವರಿದಿವೆ. ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಿದೆ. ಆದರೆ, ಜ್ಞಾನೇಶ್ ಕುಮಾರ್ ಮಾತ್ರ ತಮ್ಮ ಕುರ್ಚಿ ಬಿಡುತ್ತಿಲ್ಲ.
ದೇಶದ ಜನರಿಗಾಗಿ ಕೆಲಸ ಮಾಡಬೇಕಾದ ಆಡಳಿತಾರೂಢ ಬಿಜೆಪಿ, ಇಡೀ ವಿಚಾರವನ್ನು ಕೇವಲ ಪಕ್ಷ ರಾಜಕೀಯದ ಮಟ್ಟಕ್ಕೆ ಇಳಿಸಿದೆ. ವಿರೋಧ ಪಕ್ಷಗಳನ್ನು ಅಣಕಿಸುವುದರಲ್ಲೇ ನಿರತವಾಗಿದೆ. ಘೋಷಣೆಗಳನ್ನು ಕೂಗುತ್ತಾ, ಹಾರ್ಮೋನಿಯಂ ನುಡಿಸುತ್ತಾ, ವಿರೋಧಿಗಳನ್ನು ಹಣಿಯುತ್ತಿದ್ದೇವೆ ಎಂದು ತೃಪ್ತಿಪಟ್ಟುಕೊಳ್ಳುತ್ತಿದೆ.






