West Bengal | 33,000 ಅಭಿಮಾನಿಗಳಿಗೆ ಮೆಸ್ಸಿ ಕಾರ್ಯಕ್ರಮದ ಹಣ ಮರುಪಾವತಿ: ಸಿಎಂ ಸುವೇಂದು ಅಧಿಕಾರಿ

Photo credit : indiatoday
ಕೋಲ್ಕತ್ತಾ: ಫುಟ್ ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ಉಂಟಾಗಿದ್ದ ಗದ್ದಲದ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಯುವಭಾರತಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ವೇಳೆ ಉಂಟಾಗಿದ್ದ ಗದ್ದಲದಿಂದಾಗಿ ತೊಂದರೆಗೀಡಾಗಿದ್ದ 33,000 ಅಭಿಮಾನಿಗಳಿಗೆ ರಾಜ್ಯ ಕ್ರೀಡಾ ಬಜೆಟ್ ನಿಂದ ಹಣವನ್ನು ಮರುಪಾವತಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಡಿಸೆಂಬರ್ 13, 2025ರಂದು ಲಿಯೋನೆಲ್ ಮೆಸ್ಸಿ ಯುವಭಾರತಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದರು. ಆದರೆ, ಅಲ್ಲಿ ಗೊಂದಲ ಹಾಗೂ ಅವ್ಯವಸ್ಥೆ ಉಂಟಾಗಿತ್ತು. ಈ ಅವ್ಯವಸ್ಥೆಗೆ ತೃಣಮೂಲ ಕಾಂಗ್ರೆಸ್ ಸರಕಾರದಲ್ಲಿ ಕ್ರೀಡಾ ಸಚಿವರಾಗಿದ್ದ ಅರೂಪ್ ಬಿಸ್ವಾಸ್ ಅವರನ್ನು ದೂರಲಾಗಿತ್ತು. ಅಂದು ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಹಾಜರಿದ್ದರೂ, ಸುಮಾರು 4,000 ರೂ.ನಿಂದ 6,000 ರೂ. ಬೆಲೆ ಹೊಂದಿದ್ದ ಟಿಕೆಟ್ ಶುಲ್ಕವನ್ನು ಮರುಪಾವತಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು.
ವಿಶೇಷ ರಾಷ್ಟ್ರೀಯ ಕ್ರೀಡಾ ದಿನದ ಕಾರ್ಯಕ್ರಮದಲ್ಲಿ ಈ ಘಟನೆಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ಮೆಸ್ಸಿಗೆ ಅಪಾರ ಪ್ರಮಾಣದ ಅಭಿಮಾನಿಗಳಿದ್ದಾರೆ. ಅವರು 4,000 ರೂ.ನಿಂದ 6,000 ರೂ. ಬೆಲೆಯ ಟಿಕೆಟ್ ಗಳನ್ನು ಖರೀದಿಸಿದ್ದರು. ಈ 33,000 ಕ್ರೀಡಾಭಿಮಾನಿಗಳ ಹಣವನ್ನು ಮರುಪಾವತಿಸಬೇಕು ಎಂಬುದು ನನ್ನ ಬಯಕೆಯಾಗಿದೆ. ನಾನು ಆಂತರಿಕವಾಗಿ ಈಗಾಗಲೇ ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದೇನೆ. ಇದನ್ನು ಪೂರೈಸುತ್ತೇನೆ ಎಂಬ ಭರವಸೆ ನನಗಿದೆ” ಎಂದು ಹೇಳಿದ್ದಾರೆ.
ಶನಿವಾರ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಮಾಜಿ ಹಾಕಿ ಆಟಗಾರ ಗುರ್ಬುಕ್ಸ್ ಸಿಂಗ್, ಕ್ರೀಡಾ ಸಚಿವ ಇಂದ್ರಾಣಿ ಖಾನ್, ಅಖಿಲ ಭಾರತ ಫುಟ್ ಬಾಲ್ ಒಕ್ಕೂಟದ ಅಧ್ಯಕ್ಷ ಕಲ್ಯಾಣ್ ಚೌಬೆ ಹಾಗೂ ಮತ್ತಿತರರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಅಭಿನಂದಿಸಿ ಅವರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಯಿತು.






