ಪಂಜಾಬ್ನಲ್ಲಿ ಗರೀಬ್ ರಥ ಎಕ್ಸ್ಪ್ರೆಸ್ ರೈಲಿನ ಬೋಗಿಗೆ ಬೆಂಕಿ ; ಪ್ರಯಾಣಿಕರು ಸುರಕ್ಷಿತ

Photo | PTI
ಅಮೃತಸರ,ಅ.18: ಪಂಜಾಬ್ನ ಸಿರ್ಹಿಂದ್ ರೈಲು ನಿಲ್ದಾಣದ ಬಳಿ ಅಮೃತಸರ–ಸಹರ್ಷ ಗರೀಬ್ ರಥ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12204) ರೈಲಿನ ಒಂದು ಬೋಗಿಗೆ ಶನಿವಾರ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಅದೃಷ್ಟವಶಾತ್ ಈ ದುರಂತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ ಸುಮಾರು 7.30ರ ಸುಮಾರಿಗೆ ಅಮೃತಸರದಿಂದ ಹೊರಟಿದ್ದ ರೈಲಿನ ಎಸಿ ಬೋಗಿಯಲ್ಲಿ ಅಚಾನಕ್ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ರೈಲನ್ನು ನಿಲ್ಲಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ರೈಲ್ವೆ ಅಧಿಕಾರಿಗಳು ಹಾನಿಗೊಳಗಾದ ಬೋಗಿಯ ಪ್ರಯಾಣಿಕರನ್ನು ಇತರ ಬೋಗಿಗಳಿಗೆ ಸ್ಥಳಾಂತರಿಸಿದ್ದು, ಅಗತ್ಯ ತಪಾಸಣೆಯ ಬಳಿಕ ರೈಲು ತನ್ನ ಪ್ರಯಾಣ ಮುಂದುವರಿಸಿದೆ ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ತನಿಖೆ ಪ್ರಾರಂಭವಾಗಿದ್ದು, ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.







