ಅನಾಥವಾಗಿ ಬಿಟ್ಟುಹೋಗಿದ್ದ 800 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶ

ಸಾಂದರ್ಭಿಕ ಚಿತ್ರ Photo: www.azdps.gov/news/releases/965
ರಾಜ್ ಕೋಟ್: ಗುಜರಾತ್ ನ ಕಚ್ ಜಿಲ್ಲೆಯ ಬಂದರುನಗರ ಗಾಂಧಿಧಾಮದಿಂದ ಸುಮಾರು 30 ಕಿಲೋಮೀಟರ್ ದೂರದ ಮಿಥಿ ರೋಹರ್ ಗ್ರಾಮದ ಕರಾವಳಿಯಲ್ಲಿ ಅನಾಥವಾಗಿ ಬಿಟ್ಟುಹೋಗಿದ್ದ ಸುಮಾರು 80 ಕೆ.ಜಿ. ಕೊಕೇನ್ ಅನ್ನು ಗುಜರಾತ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 800 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ನಿಖರವಾದ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಆಗಮಿಸಿದ ಗಸ್ತು ತಿರುಗುತ್ತಿದ್ದ ಕಚ್ ಪೂರ್ವ ವಿಭಾಗದ ಪೊಲೀಸರು ಕಡಲ ಕಿನಾರೆಯಲ್ಲಿ ಹಲವು ಅನುಮಾನಾಸ್ಪದ ಪ್ಯಾಕೆಟ್ ಗಳು ಬಿದ್ದಿರುವುದನ್ನು ಮತ್ತು ಕೆಲ ಪ್ಯಾಕೆಟ್ ಗಳು ನೀರಿನಲ್ಲಿ ತೇಲಾಡುತ್ತಿರುವುದನ್ನು ಗಮನಿಸಿದರು. ತಲಾ ಒಂದು ಕೆ.ಜಿ. ತೂಕದ ಒಟ್ಟು 80 ಪ್ಯಾಕೇಟ್ ಗಳಿದ್ದವು. ಇದು ಕೊಕೇನ್ ಎನ್ನುವುದನ್ನು ವಿಧಿವಿಜ್ಞಾನ ತಜ್ಞರು ದೃಢಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾಗಳು ನೇರವಾಗಿ ಈ ಸರಕುಗಳನ್ನು ಸ್ಥಳೀಯವಾಗಿ ಹಸ್ತಾಂತರ ಮಾಡಲು ಸಾಧ್ಯವಾಗದೇ ಇರುವ ಕಾರಣದಿಂದ ಕೆಲ ನಿರ್ಜನ ಪ್ರದೇಶಗಳಲ್ಲಿ ಅವುಗಳನ್ನು ಬಿಟ್ಟುಹೋಗುವ ಮತ್ತು ಯಾರಿಗೆ ಅದು ಸೇರಬೇಕೋ ಅವರ ಕಡೆಯವರು ಇದನ್ನು ಕೊಂಡೊಯ್ಯುವ ಹೊಸ ವಿಧಾನವನ್ನು ಕಂಡುಕೊಂಡಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಕಚ್ (ಪೂರ್ವ) ಎಸ್ಪಿ ಸಾಗರ್ ಬಗ್ಮಾರ್ ಹೇಳಿದ್ದಾರೆ.
ಡ್ರಗ್ಸ್ ವಿರುದ್ಧದ ಅಭಿಯಾನದ ಅಂಗವಾಗಿ ಕರಾವಳಿಯುದ್ದಕ್ಕೂ ಮತ್ತು ಪಕ್ಕದ ಗ್ರಾಮಗಳಲ್ಲಿ ಗಸ್ತನ್ನು ತೀವ್ರಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನು ಯಾರು ಸ್ವೀಕರಿಸಬೇಕಿತ್ತು ಎಂಬ ಮಾಹಿತಿ ಕಲೆ ಹಾಕಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ, ಗಡಿಭದ್ರತಾ ಪಡೆ, ಗುಜರಾತ್ ಭಯೋತ್ಪಾದಕ ನಿಗ್ರಹ ಪಡೆ ಹಾಗೂ ಸ್ಥಳೀಯ ಪೊಲೀಸರು ಪಾಕಿಸ್ತಾನಕ್ಕೆ ಸನಿಹವಿರುವ ಈ ಜಿಲ್ಲೆಯಲ್ಲಿ ಮಾದಕ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ವಶಪಡಿಸಿಕೊಂಡಿದ್ದಾರೆ.







