ಇನ್ಸ್ಟಾಗ್ರಾಮ್ನಲ್ಲಿ ಬಿಜೆಪಿಯನ್ನು ಹಿಂದಿಕ್ಕಿದ ‘ಕಾಕ್ರೋಚ್ ಜನತಾ ಪಕ್ಷ’; ಐದೇ ದಿನಗಳಲ್ಲಿ 12 ಮಿಲಿಯನ್ ಫಾಲೋವರ್ಸ್!

Image source: Instagram
ಹೊಸದಿಲ್ಲಿ: ‘ಕಾಕ್ರೋಚ್ ಜನತಾ ಪಕ್ಷ’ (ಸಿಜೆಪಿ) ಹೆಸರಿನ ವಿಡಂಬನಾತ್ಮಕ ಆನ್ಲೈನ್ ಅಭಿಯಾನವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಆರಂಭವಾದ ಕೆಲವೇ ದಿನಗಳಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಬಿಜೆಪಿಯ ಅಧಿಕೃತ ಖಾತೆಯನ್ನು ಹಿಂದಿಕ್ಕಿದೆ.
@cockroachjantaparty ಹೆಸರಿನ ಇನ್ಸ್ಟಾಗ್ರಾಮ್ ಖಾತೆಯು ಮೇ 21ರ ವೇಳೆಗೆ 12 ಮಿಲಿಯನ್ ಫಾಲೋವರ್ಸ್ ಗಡಿ ದಾಟಿದ್ದು, ಐದೇ ದಿನಗಳಲ್ಲಿ 12 ಮಿಲಿಯನ್ಗಿಂತ ಅಧಿಕ ಫಾಲೋವರ್ಸ್ ಗಳನ್ನು ಪಡೆದುಕೊಂಡಿದೆ ಎಂದು ವೇದಿಕೆಯಲ್ಲಿ ಗೋಚರಿಸುವ ಅಂಕಿಅಂಶಗಳು ತಿಳಿಸಿವೆ.
ಇದಕ್ಕೆ ಹೋಲಿಸಿದರೆ, ಬಿಜೆಪಿಯ ಅಧಿಕೃತ ಖಾತೆ @bjp4india ಸುಮಾರು 8.7 ಮಿಲಿಯನ್ ಫಾಲೋವರ್ಸ್ ಹೊಂದಿದೆ. ಕಾಂಗ್ರೆಸ್ನ @incindia ಖಾತೆಗೆ ಸುಮಾರು 13.2 ಮಿಲಿಯನ್ ಫಾಲೋವರ್ಸ್ ಇದ್ದರೆ, ಆಮ್ ಆದ್ಮಿ ಪಕ್ಷದ ಖಾತೆಗೆ ಸುಮಾರು 1.9 ಮಿಲಿಯನ್ ಫಾಲೋವರ್ಸ್ ಗಳಿದ್ದಾರೆ.
ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಮಾಡಿದ್ದಾರೆ ಎನ್ನಲಾದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ, ಯುವಜನರು ನಡೆಸುತ್ತಿರುವ ವಿಡಂಬನಾತ್ಮಕ ಚಳವಳಿಯಾಗಿ ಈ ಅಭಿಯಾನ ಮೇ 16ರಂದು ಮೊದಲು ಕಾಣಿಸಿಕೊಂಡಿತು. ಒಂದು ದಿನದ ಬಳಿಕ ಎಕ್ಸ್ನಲ್ಲಿ ಗಮನ ಸೆಳೆದ ನಂತರ ಇದರ ಇನ್ಸ್ಟಾಗ್ರಾಮ್ ಖಾತೆ ಆರಂಭಿಸಲಾಯಿತು.
‘ಯುವಕರಿಂದ, ಯುವಕರಿಗಾಗಿ, ಯುವಕರ ರಾಜಕೀಯ ವೇದಿಕೆ’ ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಈ ಖಾತೆ, ನಿರುದ್ಯೋಗ, ರಾಜಕೀಯ ಹೊಣೆಗಾರಿಕೆ, ಪ್ರಶ್ನೆಪತ್ರಿಕೆ ಸೋರಿಕೆ ವಿವಾದಗಳಂತಹ ವಿಚಾರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿದೆ. ಇವು ಕಿರಿಯ ವಯಸ್ಸಿನ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಹೆಚ್ಚಿನ ಪ್ರತಿಧ್ವನಿ ಮೂಡಿಸುತ್ತಿರುವಂತೆ ಕಂಡುಬಂದಿದೆ.
ಖಾತೆ ಆರಂಭವಾದ ಕೆಲವೇ ಸಮಯದಲ್ಲಿ ಸ್ಫೋಟಕ ಬೆಳವಣಿಗೆ ಕಂಡಿದ್ದು, ಕೇವಲ 78 ಗಂಟೆಗಳಲ್ಲಿ 3 ಮಿಲಿಯನ್ ಫಾಲೋವರ್ಸ್ ದಾಟಿ, ಐದೇ ದಿನಗಳಲ್ಲಿ 12 ಮಿಲಿಯನ್ ಗಡಿ ತಲುಪಿದೆ ಎಂದು ವರದಿಯಾಗಿದೆ.
ಇಲ್ಲಿಯವರೆಗೆ ಕೇವಲ 56 ಪೋಸ್ಟ್ಗಳನ್ನು ಮಾತ್ರ ಹಂಚಿಕೊಂಡಿದ್ದರೂ, ಫಾಲೋವರ್ ಗಳ ಸಂಖ್ಯೆಯಲ್ಲಿ ಹಲವು ರಾಜಕೀಯ ಪಕ್ಷಗಳ ಅಧಿಕೃತ ಖಾತೆಗಳನ್ನು ಮೀರಿಸಿದೆ. ಮತ್ತೊಂದೆಡೆ, ಬಿಜೆಪಿಯ ಇನ್ಸ್ಟಾಗ್ರಾಮ್ ಪುಟದಲ್ಲಿ ಇದುವರೆಗೆ 18,000ಕ್ಕೂ ಹೆಚ್ಚು ಪೋಸ್ಟ್ಗಳು ಪ್ರಕಟವಾಗಿವೆ.
ಬಿಜೆಪಿಯನ್ನು ಹಿಂದಿಕ್ಕಿದ ಬಳಿಕ ಖಾತೆ ಸಂಭ್ರಮ ವ್ಯಕ್ತಪಡಿಸಿದ್ದು, “ಯುವಕರ ಶಕ್ತಿಯನ್ನು ಕಡಿಮೆ ಅಂದಾಜು ಮಾಡಬೇಡಿ” ಎಂದು ಪೋಸ್ಟ್ ಮಾಡಿದೆ. ಮತ್ತೊಂದು ಪೋಸ್ಟ್ನಲ್ಲಿ “ವಿಶ್ವದ ಅತಿದೊಡ್ಡ ಪಕ್ಷ ಎಂದು ಅವರು ಹೇಳಿದ್ದರು” ಎಂದು ಬರೆದು ಬಿಜೆಪಿ ಸಂಘಟನಾ ಬಲವನ್ನು ವ್ಯಂಗ್ಯವಾಡಿದೆ.
ಈ ಚಳವಳಿ ಇತರ ಸಾಮಾಜಿಕ ಜಾಲತಾಣಗಳಲ್ಲಿಯೂ ವೇಗವಾಗಿ ವಿಸ್ತರಿಸಿದೆ. ಆರಂಭದಲ್ಲಿ ತಮಾಷೆಯ ರೂಪದಲ್ಲಿ ಆರಂಭವಾದ ಈ ಅಭಿಯಾನದ ಎಕ್ಸ್ ಖಾತೆ ಮೇ 21ರ ವೇಳೆಗೆ 1.65 ಲಕ್ಷಕ್ಕೂ ಅಧಿಕ ಫಾಲೋವರ್ ಗಳನ್ನು ಪಡೆದುಕೊಂಡಿದೆ.






