‘ಕಾಕ್ರೋಚ್ ಜನತಾ ಪಕ್ಷ’ದ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ!

ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ ವಿಡಂಬನಾತ್ಮಕ ರಾಜಕೀಯ ವೇದಿಕೆಯಾಗಿ ಗಮನ ಸೆಳೆದಿರುವ ‘ಕಾಕ್ರೋಚ್ ಜನತಾ ಪಕ್ಷ’ (ಸಿಜೆಪಿ)ದ ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ ಎಂದು ಅದರ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಿಳಿಸಿದ್ದಾರೆ. ಅನಧಿಕೃತ ರಾಜಕೀಯ ಅಭಿಯಾನ ಆರಂಭಗೊಂಡ ಕೆಲವೇ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವಾರ ಆರಂಭವಾದ ಸಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಜನಪ್ರಿಯತೆ ಗಳಿಸಿತ್ತು. ಪಕ್ಷದ ಎಕ್ಸ್ ಖಾತೆಗೆ 1.65 ಲಕ್ಷಕ್ಕೂ ಹೆಚ್ಚು ಫಾಲೋವರ್ ಗಳಿದ್ದು, ಇದುವರೆಗೆ 6 ಲಕ್ಷಕ್ಕೂ ಹೆಚ್ಚು ನೋಂದಣಿಗಳು ನಡೆದಿವೆ ಎಂದು ದೀಪ್ಕೆ ತಿಳಿಸಿದ್ದಾರೆ.
ಸಿಜೆಪಿಯ ಎಕ್ಸ್ ಖಾತೆಯಲ್ಲಿ ‘ಕಾನೂನುಬದ್ಧ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ಖಾತೆ ತಡೆಹಿಡಿಯಲಾಗಿದೆ’ ಎಂಬ ಸಂದೇಶ ಕಾಣಿಸಿಕೊಂಡಿದೆ. ಆದರೆ, ಈ ವರದಿ ಸಲ್ಲಿಸುವ ವೇಳೆಗೆ ಅದರ ಇನ್‌ಸ್ಟಾಗ್ರಾಮ್ ಖಾತೆ ಸಕ್ರಿಯವಾಗಿದ್ದು, 12.6 ಮಿಲಿಯನ್ ಅನುಯಾಯಿಗಳನ್ನು ಹೊಂದಿತ್ತು.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಯುವ ನಿರುದ್ಯೋಗಿಗಳನ್ನು ‘ಜಿರಳೆಗಳಂತೆ’ ಎಂದು ಉಲ್ಲೇಖಿಸಿದ್ದರೆಂಬ ಚರ್ಚೆಯ ನಂತರ ಈ ವೇದಿಕೆ ತಮಾಷೆಯ ರೂಪದಲ್ಲಿ ಆರಂಭವಾಗಿತ್ತು ಎಂದು ಹೇಳಲಾಗಿದೆ. ಮೇ 16ರಂದು ಅಭಿಜೀತ್ ದೀಪ್ಕೆ ಈ ಆನ್‌ಲೈನ್ ಅಭಿಯಾನ ಆರಂಭಿಸಿದ್ದರು. ಅವರು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸಿಜೆಪಿ ಎಂಬ ಹೆಸರು ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ)ಯನ್ನು ವ್ಯಂಗ್ಯಾತ್ಮಕವಾಗಿ ಟೀಕಿಸುವ ರೀತಿಯಲ್ಲಿ ರೂಪಿಸಲಾಗಿದೆ. ತನ್ನ ವೆಬ್‌ಸೈಟ್‌ನಲ್ಲಿ ಸಿಜೆಪಿ ತನ್ನನ್ನು ‘ಸೋಮಾರಿ ಮತ್ತು ನಿರುದ್ಯೋಗಿಗಳ ಧ್ವನಿ’ ಎಂದು ಪರಿಚಯಿಸಿಕೊಂಡಿದೆ.
ಪಕ್ಷದ ಪ್ರಣಾಳಿಕೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ರಾಜ್ಯಸಭಾ ಸ್ಥಾನ ನೀಡುವುದನ್ನು ನಿಷೇಧಿಸುವುದು, ಸಂಸತ್ತಿನ ಬಲ ಹೆಚ್ಚಿಸದೆ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿ ಕಲ್ಪಿಸುವುದು ಹಾಗೂ ಪಕ್ಷಾಂತರ ಮಾಡಿದವರಿಗೆ 20 ವರ್ಷಗಳ ನಿಷೇಧ ಹೇರಬೇಕು ಎಂಬ ಬೇಡಿಕೆಗಳು ಸೇರಿವೆ.
ದೀಪ್ಕೆ ಅವರ ಪ್ರಕಾರ, ಸಿಜೆಪಿ ಈಗಾಗಲೇ 6 ಲಕ್ಷಕ್ಕೂ ಹೆಚ್ಚು ನೋಂದಣಿಗಳನ್ನು ಪಡೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 12.3 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಸಿಜೆಪಿ, 8.7 ಮಿಲಿಯನ್ ಫಾಲೋವರ್ ಗಳಿರುವ ಬಿಜೆಪಿ ಖಾತೆಯನ್ನು ಮೀರಿಸಿದೆ ಎಂದು ಅವರು ಹೇಳಿದ್ದಾರೆ.
As expected Cockroach Janta Party’s account has been withheld in India. pic.twitter.com/44ymllnSMJ
— Abhijeet Dipke (@abhijeet_dipke) May 21, 2026






