ವಾಣಿಜ್ಯ LPG ಸಿಲಿಂಡರ್ ದರದಲ್ಲಿ 195.5 ರೂ. ಏರಿಕೆ: ಹೋಟೆಲ್, ರೆಸ್ಟೋರೆಂಟ್ ಮಾಲಕರಿಗೆ ಶಾಕ್

ಹೊಸದಿಲ್ಲಿ: ಪಶ್ಚಿಮ ಏಶ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬುಧವಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು 195.5 ರೂ.ನಷ್ಟು ಏರಿಕೆ ಮಾಡಲಾಗಿದೆ. ಇದರಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಮಸ್ಯೆ ಎದುರಾಗಿದೆ.
19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇದೀಗ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 2,078.50 ರೂ. ಆಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ತಿಳಿಸಿವೆ.
ಕಳೆದ ಮಾರ್ಚ್ 1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 114.5ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಮಾರ್ಚ್ 7ರಂದು 60ರೂ.ನಷ್ಟು ಏರಿಕೆಯಾಗಿದ್ದ 14.2 ಕೆಜಿ ತೂಕದ ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದಿಲ್ಲಿಯಲ್ಲಿ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆ 913ರೂ.ಇದೆ.
ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಗಳು ಅಂತಾರಾಷ್ಟ್ರೀಯ ಮೂಲ ದರ ಹಾಗೂ ವಿನಿಮಯ ದರವನ್ನು ಆಧರಿಸಿ ಪ್ರತಿ ತಿಂಗಳ ಮೊದಲ ದಿನದಂದು ಎಟಿಎಫ್ ಮತ್ತು ಎಲ್‌ಪಿಜಿ ದರವನ್ನು ಪರಿಷ್ಕರಿಸುತ್ತವೆ.




