Chhattisgarh| ದುಧ್ಕೈಯ್ಯ ಗ್ರಾಮದಲ್ಲಿ ಹಿಂಸಾಚಾರ: ಮುಸ್ಲಿಮರ ಮನೆಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಿದ ದುಷ್ಕರ್ಮಿಗಳು

Photo| thehindu/Shubhomoy Sikdar
ರಾಯ್ಪುರ: ಛತ್ತೀಸ್ಗಢದ ಗರಿಯಾಬಂದ್ ಜಿಲ್ಲೆಯ ದುಧ್ಕೈಯ್ಯ ಗ್ರಾಮದಲ್ಲಿ ರವಿವಾರ ಗುಂಪೊಂದು ಮುಸ್ಲಿಂ ಸಮುದಾಯಕ್ಕೆ ಸೇರಿದ ಜನರ ಒಡೆತನದ 12 ಮನೆಗಳು ಮತ್ತು ಹಲವು ವಾಹನಗಳಿಗೆ ಬೆಂಕಿ ಹಚ್ಚಿದೆ. ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುವ ವೇಳೆ ಕನಿಷ್ಠ 7 ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು newindianexpress ವರದಿ ಮಾಡಿದೆ.
ಹಿಂಸಾಚಾರ ಮತ್ತಷ್ಟು ಹೆಚ್ಚಾಗುವುದನ್ನು ತಡೆಯಲು ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ರಾಜಿಂ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಗರಿಯಾಬಂದ್ ಪೊಲೀಸ್ ವರಿಷ್ಠಾಧಿಕಾರಿ ವೇದವ್ರತ್ ಸಿರ್ಮೌರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ಆರಿಫ್ ಮತ್ತು ಅವನ ಇಬ್ಬರು ಸಹಚರರು ಸ್ಥಳೀಯ ಯುವಕರ ಗುಂಪಿನ ಮೇಲೆ ರಾಡ್ಗಳಿಂದ ಹಲ್ಲೆ ನಡೆಸಿದಾಗ ಈ ಅಶಾಂತಿ ಭುಗಿಲೆದ್ದಿದೆ. ಈ ಆರೋಪಿಗಳು ಶಿವ ಮಂದಿರದ ವಿಗ್ರಹ ಧ್ವಂಸಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಿಡುಗಡೆ ಬಳಿಕಸಾಕ್ಷಿಗಳು ಮತ್ತು ದೂರುದಾರರಿಗೆ ಬೆದರಿಕೆ ಹಾಕಿದ್ದಾರೆ ಮತ್ತು ಕಿರುಕುಳ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮದ ಕೆಲವರು ಆರೋಪಿಗಳು, ಅವರ ಸಹಚರರು ಮತ್ತು ನೆರೆಹೊರೆಯವರಿಗೆ ಸೇರಿದ ಸುಮಾರು 12 ಮನೆಗಳು ಮತ್ತು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮನೆಗಳು ಮತ್ತು ನಿವಾಸಿಗಳನ್ನು ಗುರಿಯಾಗಿಸಿಕೊಂಡು ಗುಂಪು ದಾಳಿ ನಡೆಸುವುದನ್ನು ತಡೆಯಲು ಪ್ರಯತ್ನಿಸಿದ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆಯಲಾಗಿದೆ. ಘಟನೆಯಲ್ಲಿ 6 ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಎಸ್ಪಿ ವೇದವ್ರತ್ ಸಿರ್ಮೌರ್ ಹೇಳಿದ್ದಾರೆ.
ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ "ಕಾನೂನು ಮತ್ತು ಸುವ್ಯವಸ್ಥೆ ಕುಸಿತ" ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕ್ಯಾಬಿನೆಟ್ ಸಚಿವ ದಯಾಳ್ದಾಸ್ ಬಾಘೇಲ್ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ಹಳೆಯ ದ್ವೇಷದಿಂದ ಉಂಟಾದ ಎರಡು ಸಮುದಾಯಗಳ ನಡುವಿನ ಸಂಘರ್ಷ. ಈಗ ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.







