ರಾಹುಲ್ ಗಾಂಧಿ ಜೊತೆ ಕಸಬ್ ಹೋಲಿಕೆ: ನಿವೃತ್ತ ವಾಯುಪಡೆ ಅಧಿಕಾರಿಯ ಪೋಸ್ಟ್ ಗೆ ತೀವ್ರ ಆಕ್ಷೇಪ
ಸೈಬರ್ ದೂರು ದಾಖಲಿಸಿದ ಕಾಂಗ್ರೆಸ್ ಸೇವಾದಳ

ರಾಹುಲ್ ಗಾಂಧಿ | Photo Credit : X
ಹೊಸದಿಲ್ಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು 26/11 ಮುಂಬೈ ದಾಳಿ ಪ್ರಕರಣದ ಅಪರಾಧಿ ಅಜ್ಮಲ್ ಕಸಬ್ ಗೆ ಹೋಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ನಿವೃತ್ತ ವಾಯುಪಡೆ ಅಧಿಕಾರಿ ಫ್ಲೈಟ್ ಲೆಫ್ಟಿನೆಂಟ್ ಅನೂಪ್ ವರ್ಮಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ನಿವೃತ್ತ ವಾಯುಪಡೆ ಅಧಿಕಾರಿ ಅನೂಪ್ ವರ್ಮಾ ‘ಎಕ್ಸ್’ನಲ್ಲಿ ರಾಹುಲ್ ಗಾಂಧಿ ಅವರ ಚಿತ್ರವನ್ನು ಕಸಬ್ ನ ಚಿತ್ರದೊಂದಿಗೆ ಹಂಚಿಕೊಂಡಿದ್ದು, ರಾಹುಲ್ ಗಾಂಧಿ ಭಾರತಕ್ಕೆ ಕಸಬ್ಗಿಂತಲೂ ಹೆಚ್ಚು ಅಪಾಯಕಾರಿ ಎಂಬ ಅರ್ಥದ ಹೋಲಿಕೆ ಮಾಡಿದ್ದಾರೆ.
ಈ ಕುರಿತು ಸೆ. 29ರಂದು ಕಾಂಗ್ರೆಸ್ ಸೇವಾದಳದ ಕಾನೂನು ಘಟಕದ ‘ಎಕ್ಸ್’ ಖಾತೆಯಿಂದ ಪ್ರತಿಕ್ರಿಯೆ ಪ್ರಕಟವಾಗಿದ್ದು, ಅನೂಪ್ ವರ್ಮಾ ಅವರ ಪೋಸ್ಟ್ ವಿರುದ್ಧ ಸೈಬರ್ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದೆ. ಪ್ರಕರಣವನ್ನು ಸೂಕ್ತ ಕಾನೂನು ಮಾರ್ಗಗಳ ಮೂಲಕ ಮುಂದುವರಿಸುವುದಾಗಿ ಹೇಳಿರುವ ಕಾನೂನು ಘಟಕ, ಕಾಂಗ್ರೆಸ್ ನಾಯಕರು ಹಾಗೂ ಸದಸ್ಯರನ್ನು ಗುರಿಯಾಗಿಸಿಕೊಂಡು ದುರುದ್ದೇಶಪೂರಿತ ಅಥವಾ ಕಾನೂನುಬಾಹಿರ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ತಿಳಿಸಿದೆ.
ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯವನ್ನು ಭಯೋತ್ಪಾದನೆಯೊಂದಿಗೆ ಸಮೀಕರಿಸುವ ಪ್ರಯತ್ನದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಸೇವಾದಳದ ಕಾನೂನು ಘಟಕ ಹೇಳಿದೆ. ಸಂವಿಧಾನದ 19ನೇ ವಿಧಿಯಡಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಜವಾಬ್ದಾರಿಗಳೂ ಇದ್ದು, ಕಾನೂನುಬದ್ಧ ನಿರ್ಬಂಧಗಳಿಗೆ ಅದು ಒಳಪಟ್ಟಿದೆ ಎಂದು ಉಲ್ಲೇಖಿಸಿರುವ ಸೇವಾದಳ ಘಟಕವು, ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಅನ್ವಯವಾಗುವ ಸೈಬರ್ ಕಾನೂನುಗಳ ಅಡಿಯಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ.
With all conviction, I can tell you guys
— Flt Lt Anoop Verma (Retd.) 🇮🇳 (@FltLtAnoopVerma) September 28, 2026
The person on left is far more dangerous for Bharat pic.twitter.com/pe7TkzqnSJ
►ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವಿರೋಧ
ಅನೂಪ್ ವರ್ಮಾ ಅವರ ಪೋಸ್ಟ್ ಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವುದರಿಂದ ಅವರನ್ನು ಶಿಕ್ಷೆಗೆ ಗುರಿಯಾದ ಭಯೋತ್ಪಾದಕನೊಂದಿಗೆ ಹೋಲಿಸುವುದು ಸೂಕ್ತವಲ್ಲ ಎಂದು ಕೆಲವರು ಹೇಳಿದ್ದಾರೆ.
ನಿವೃತ್ತ ವಾಯುಪಡೆ ಅಧಿಕಾರಿಯ ಪೋಸ್ಟ್ ಗೆ AICC ಮಾಧ್ಯಮ ಸಂಯೋಜಕಿ ರಶ್ಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಕಸಬ್ ಒಬ್ಬ ಭಯೋತ್ಪಾದಕ. ಮುಂಬೈನಲ್ಲಿ ಅಮಾಯಕರು ಹತ್ಯೆಯಾದರು. ನ್ಯಾಯಾಲಯ ಆತನಿಗೆ ಶಿಕ್ಷೆ ವಿಧಿಸಿ ಗಲ್ಲಿಗೇರಿಸಿದೆ. ‘ಎಡಭಾಗದಲ್ಲಿರುವ ವ್ಯಕ್ತಿ ಭಾರತಕ್ಕೆ ಹೆಚ್ಚು ಅಪಾಯಕಾರಿ’ ಎಂಬ ಹೇಳಿಕೆಯೊಂದಿಗೆ ಕಸಬ್ ನನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಹೋಲಿಕೆ ಮಾಡುವುದು ದೇಶಭಕ್ತಿಯಲ್ಲ; ಇದು 26/11ರ ಹುತಾತ್ಮರನ್ನು ಅಗ್ಗದ ರಾಜಕೀಯಕ್ಕೆ ಬಳಸಿಕೊಳ್ಳುವುದಾಗಿದೆ” ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ರೈಲು ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿರುವ ಚಿತ್ರವನ್ನು, ಕೈಯಲ್ಲಿ ಬಂದೂಕು ಹಿಡಿದು ಬಂದಿದ್ದ ಕಸಬ್ ನ ಚಿತ್ರದೊಂದಿಗೆ ಹೋಲಿಸುವುದು ತರ್ಕಹೀನ ಎಂದು ಅವರು ಟೀಕಿಸಿದ್ದಾರೆ.
ಸಮವಸ್ತ್ರದ ಗೌರವವನ್ನು ಕಾಪಾಡಿಕೊಳ್ಳಲು ಮಾತಿನಲ್ಲಿ ಸಂಯಮ ಅಗತ್ಯವಾಗಿದ್ದು, ಹುದ್ದೆ ಅಥವಾ ಶ್ರೇಣಿ ವಿವೇಚನೆಗೆ ಪರ್ಯಾಯವಲ್ಲ ಎಂದಿರುವ ರಶ್ಮಿ, “ಭಯೋತ್ಪಾದನೆಯನ್ನು ರಾಜಕೀಯದ ಲೇಬಲ್ ಆಗಿ ಬಳಸಬೇಡಿ. ಇಂತಹ ಹೇಳಿಕೆಗಳು ದೇಶವನ್ನು ರಕ್ಷಿಸುವುದಿಲ್ಲ; ಬದಲಾಗಿ ಸಾರ್ವಜನಿಕ ಚರ್ಚೆಯನ್ನು ಅಧಃಪತನದತ್ತ ಕೊಂಡೊಯ್ಯುತ್ತವೆ. ಸ್ವಲ್ಪವಾದರೂ ನಾಚಿಕೆ ಇರಲಿ” ಎಂದು ಹೇಳಿದ್ದಾರೆ.
A Cyber Complaint has been filed against the concerned post by Flt. Lt. Anoop Verma (Retd.), and the matter will be actively pursued through appropriate legal channels.
— Congress Seva Dal Legal Cell (@SevadalLegal) September 29, 2026
Congress Seva Dal Legal Cell will not tolerate any malicious or unlawful acts targeting the Congress Party and… https://t.co/AbQ6UGGAH7
@SachinDilipAgr3 ಎಂಬ ಬಳಕೆದಾರರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿ, “ನೀವು ವಾಕ್ಯವನ್ನು ಪೂರ್ಣಗೊಳಿಸಿಲ್ಲ. ಎಡಭಾಗದಲ್ಲಿರುವ ವ್ಯಕ್ತಿ ಬಿಜೆಪಿಗೆ ಹೆಚ್ಚು ಅಪಾಯಕಾರಿ ಎಂದು ಹೇಳಲು ಉದ್ದೇಶಿಸಿದ್ದೀರಿ” ಎಂದು ಹೇಳಿದ್ದಾರೆ.
ನರಸಿಂಹ ಮೂರ್ತಿ ಎಂಬವರು ಪ್ರತಿಕ್ರಿಯಿಸಿ, “IIMನಲ್ಲಿ ಶಿಕ್ಷಣ ಪಡೆದಿರುವುದು ಮತ್ತು ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡಿರುವ ಮಾತ್ರದಿಂದ ಯಾರೂ ಸಭ್ಯತೆ ಮತ್ತು ಶಿಷ್ಟಾಚಾರ ಕಲಿಯುವುದಿಲ್ಲ ಎಂಬುದನ್ನು ಈ ವ್ಯಕ್ತಿ ಸಾಬೀತುಪಡಿಸುತ್ತಿದ್ದಾರೆ. ಇಂತಹ ನಾಗರಿಕರು ದೇಶಕ್ಕೆ ಇನ್ನಷ್ಟು ಅಪಾಯಕಾರಿ” ಎಂದು ಟೀಕಿಸಿದ್ದಾರೆ.
ಕರನ್ ಟಂಡನ್ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರು, “ನಿಮ್ಮ ರಾಜಕೀಯವು LOP (ವಿಪಕ್ಷ ನಾಯಕ) ರಾಹುಲ್ ಗಾಂಧಿಯವರು ‘ಭಯೋತ್ಪಾದಕನಿಗಿಂತಲೂ ಅಪಾಯಕಾರಿ’ ಎಂದು ಕಾಣುವ ಮಟ್ಟಕ್ಕೆ ತಲುಪಿದ್ದರೆ, ನೀವು ಭಾರತವನ್ನು ರಕ್ಷಿಸುತ್ತಿಲ್ಲ; ಪಕ್ಷಪಾತದ ಕೆಟ್ಟ ಮಾತುಗಳನ್ನು ದೇಶಭಕ್ತಿಯ ಹೆಸರಿನಲ್ಲಿ ಹೊರಹಾಕುತ್ತಿದ್ದೀರಿ ಅಷ್ಟೇ” ಎಂದು ಹೇಳಿದ್ದಾರೆ.
“ನೀವು LOP (ವಿಪಕ್ಷ ನಾಯಕ) ಅವರನ್ನು ಶಿಕ್ಷೆಗೊಳಗಾದ ಭಯೋತ್ಪಾದಕನೊಂದಿಗೆ ಹೋಲಿಸುತ್ತಿದ್ದೀರಿ. ನೀವು ಸೇನೆಯಲ್ಲಿ ಸೇವೆ ಸಲ್ಲಿಸಿದ್ದೀರಿ; ಕನಿಷ್ಠ ಶಿಷ್ಟಾಚಾರವನ್ನಾದರೂ ಕಾಪಾಡಿಕೊಳ್ಳಿ. ಸರ್ಕಾರದ ಪರವಾಗಿ ಅತಿಯಾದ ಬೆಂಬಲ ನೀಡುವವರಂತೆ ವರ್ತಿಸುವುದಕ್ಕಿಂತ, ಬೇರೆ ರೀತಿಯಲ್ಲಿ ಅವರನ್ನು ಟೀಕಿಸಬಹುದು” ಎಂದು ಅರ್ನಬ್ ಎಂಬವರು ಪ್ರತಿಕ್ರಿಯಿಸಿದ್ದಾರೆ.






