ಮಸೂದೆ ತಮ್ಮ ಬಳಿ ಇಟ್ಟುಕೊಂಡ ಕೇರಳ ರಾಜ್ಯಪಾಲರ ನಡೆ ಕಳವಳ : ನ್ಯಾಯಮೂರ್ತಿ ನಾರಿಮನ್
ರೋಹಿಂಟನ್ ಎಫ್ ನಾರಿಮನ್ | Photo : PTI
ಮುಂಬೈ: "ಸ್ವತಂತ್ರವಾಗಿ ಕೆಲಸ ಮಾಡುವವರನ್ನು ಮಾತ್ರ ರಾಜ್ಯಪಾಲರನ್ನಾಗಿ ನೇಮಿಸಬೇಕು, ಕೇರಳದಂತೆ ಅಲ್ಲ", ಎಂದು ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ಎಫ್ ನಾರಿಮನ್ ಹೇಳಿದ್ದಾರೆ.
ಮುಂಬೈನ ಏಷ್ಯಾಟಿಕ್ ಸೊಸೈಟಿ ತನ್ನ ದರ್ಬಾರ್ ಹಾಲ್ನಲ್ಲಿ ಶುಕ್ರವಾರ ಆಯೋಜಿಸಿದ್ದ 30ನೇ ಬನ್ಸಾರಿ ಸೇಠ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ "ಭಾರತದ ಸಂವಿಧಾನ: ತಡೆ ಮತ್ತು ಸಮತೋಲನ" ಕುರಿತು ಅವರು ಮಾತನಾಡಿದರು. “ಕೇರಳದ ರಾಜ್ಯಪಾಲರು 8 ಮಸೂದೆಗಳನ್ನು 23 ತಿಂಗಳ ಅವಧಿಯವರೆಗೆ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಸುಪ್ರಿಂ ಕೋರ್ಟು ತರಾಟೆಗೆ ತೆಗೆದುಕೊಂಡಾಗ, ಒಂದು ಮಸೂದೆ ಅಂಗೀಕಾರ ಮಾಡಿ, 7 ಮಸೂದೆಗಳನ್ನು ರಾಷ್ಟ್ರಪತಿಗಳ ಅವಗಾಹನೆಗೆ ತಂದರು. ಇದು ಮತ್ತೊಮ್ಮೆ ಬಹಳ ಗೊಂದಲದ ಲಕ್ಷಣವಾಗಿದೆ. ಒಂದು ರೀತಿಯಲ್ಲಿ ಇದು ಮಸೂದೆಯನ್ನು ನಿರ್ಲಕ್ಷ್ಯ ಮಾಡುವ ಲಕ್ಷಣ” ಎಂದು ನಾರಿಮನ್ ಅಚ್ಚರಿ ವ್ಯಕ್ತಪಡಿಸಿದರು.
ರಾಜ್ಯಪಾಲರು ಮಸೂದೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವ ಪ್ರವೃತ್ತಿಯ ಬಗ್ಗೆ ಕಳವಳ ಅವರು ವ್ಯಕ್ತಪಡಿಸಿದ್ದಾರೆ. ಕೇರಳ ರಾಜ್ಯಪಾಲರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ ಅದನ್ನು "ಗೊಂದಲಕಾರಿ ಸಂಗತಿ" ಎಂದು ಕರೆದಿದ್ದಾರೆ. ಮಸೂದೆಗಳಿಗೆ ಒಪ್ಪಿಗೆ ನೀಡಲು ಕೇರಳ ರಾಜ್ಯಪಾಲರ ನಿರಾಕರಣೆಯನ್ನು ಪ್ರಶ್ನಿಸಿ ಕೇರಳ ರಾಜ್ಯ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್, ಎರಡು ವರ್ಷಗಳಿಂದ ಮಸೂದೆಗಳ ಕುರಿತು ಏಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿ, ಕೇರಳ ರಾಜ್ಯಪಾಲರನ್ನು ಟೀಕಿಸಿತ್ತು.