ಖರ್ಗೆಯವರನ್ನು ‘ದೇಶದ್ರೋಹಿ’ಯಾಗಿ ಬಿಂಬಿಸಿದ ಡಿಡಿ ಪತ್ರಕರ್ತನ ವಿರುದ್ಧ ಕಾಂಗ್ರೆಸ್ ದೂರು

ದೂರದರ್ಶನ ಪತ್ರಕರ್ತ ಅಶೋಖ್ ಶ್ರೀವಾಸ್ತವ
ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೇಶದ್ರೋಹಿಯಾಗಿ ಬಿಂಬಿಸಿದ ಆರೋಪದಲ್ಲಿ ದೂರದರ್ಶನ ಪತ್ರಕರ್ತ ಅಶೋಖ್ ಶ್ರೀವಾಸ್ತವ ಅವರ ವಿರುದ್ಧ ಭಾರತೀಯ ಯುವ ಕಾಂಗ್ರೆಸ್ ಪೊಲೀಸರಿಗೆ ದೂರು ನೀಡಿದೆ.
ಹೊಸದಿಲ್ಲಿ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ತಾರಕಕ್ಕೇರಿರುವ ಸಂದರ್ಭದಲ್ಲಿ ಶ್ರೀವಾಸ್ತವ ಅವರು ಮೇ 8ರಂದು ಪ್ರಸ್ತುತಪಡಿಸಿದ ಕಾರ್ಯಕ್ರಮದಲ್ಲಿ ಖರ್ಗೆಯವರನ್ನು ಕೆಟ್ಟದಾಗಿ ಬಿಂಬಿಸಿದ್ದಾಗಿ ದೂರಲಾಗಿದೆ. "ಭಾರತ್ ತಯ್ಯಾರ್... ಪರ್ ಘರ್ ಮೈನ್ ಕಿತ್ನೇ ಗದ್ದರ್" ಎಂದು ಕೇಳುವ ಸಂದರ್ಭದಲ್ಲಿ ಪ್ರದರ್ಶಿಸಲಾದ ಪೋಸ್ಟರ್ನಲ್ಲಿ ಖರ್ಗೆ ಮತ್ತು ಕಾಂಗ್ರೆಸ್ನ ಮುಸ್ಲಿಂ ಸಂಸದ ಇಮ್ರಾನ್ ಮಸೂದ್ ಅವರನ್ನು ಬಿಂಬಿಸಲಾಗಿತ್ತು.
ಎಐಸಿಸಿ ಸದಸ್ಯ ಮತ್ತು ಯುವ ಕಾಂಗ್ರೆಸ್ನ ಕಾನೂನು ವಿಭಾಗದ ಅಧ್ಯಕ್ಷ ರೂಪೇಶ್ ಎಸ್.ಬಡೂರಿಯಾ ಈ ಸಂಬಂಧ ದೂರು ನೀಡಿದ್ದು, "ದೂರದರ್ಶನದಲ್ಲಿ ರಾಷ್ಟ್ರಾದ್ಯಂತ ಪ್ರಸಾರವಾದ ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಅಶೋಕ್ ಶ್ರೀವಾಸ್ತವ ದೇಶದ್ರೋಹಿ ಎಂಬ ರೀತಿಯಲ್ಲಿ ಬಿಂಬಿಸಿದ್ದಾರೆ. ಇದು ಶುದ್ಧ ತಪ್ಪು; ದುರುದ್ದೇಶಪೂರಿತ, ಪ್ರಚೋದನಾಕಾರಿ ಮತ್ತು ಖರ್ಗೆಯವರ ಬಗ್ಗೆ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ದ್ವೇಷ ಮೂಡಿಸುವ ಹುನ್ನಾರ" ಎಂದು ವಿವರಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಈ ಪ್ರಸಾರವನ್ನು ಕಟುವಾಗಿ ಟೀಕಿಸಿದ್ದು, ಇದು ದೇಶದ ಏಕತೆಯ ತತ್ವದ ಬಗ್ಗೆ ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನದ ಜತೆಗಿನ ಸಂಘರ್ಷದ ಅವಧಿಯಲ್ಲಿ ಪೂರ್ವಾಗ್ರಹಪೀಡಿತವಾಗಿ ಬಿಂಬಿಸುವ ಕ್ರಮ ಎಂದು ಹೇಳಿದೆ.
ಯುದ್ಧದಂಥ ಸನ್ನಿವೇಶದಲ್ಲಿ ಅಶೋಕ್ ಶ್ರೀವಾಸ್ತವ ಮತ್ತು ಸರ್ಕಾರಿ ಸ್ವಾಮ್ಯದ ಡಿಡಿ ನ್ಯೂಸ್ ಇಂಥ ಅವಹೇಳನಕಾರಿ ಕಾರ್ಯಕ್ರಮವನ್ನು ಪ್ರಸಾರ ಮಾಡುವುದು ಖರ್ಗೆಯವರ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡುವ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ದ್ವೇಷಭಾವನೆ ಮೂಡಿಸುವ ಕ್ರಮವಾಗಿದೆ. ಇದು ದೇಶದ ಏಕತೆ, ಶಾಂತಿ ಮತ್ತು ಸಾಮರಸ್ಯದ ವಿರುದ್ಧದ ಪೂರ್ವಾಗ್ರಹಪೀಡಿತ ತಂತ್ರವಾಗಿದೆ ಎಂದು ಅವರು ದೂರಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.







