59 ವರ್ಷಗಳಲ್ಲಿ ಮೊದಲ ಬಾರಿಗೆ ತಮಿಳುನಾಡು ಸಂಪುಟಕ್ಕೆ ಕಾಂಗ್ರೆಸ್ ಸೇರ್ಪಡೆ

ರಾಜೇಶ್ ಕುಮಾರ್ | ಪಿ ವಿಶ್ವನಾಥನ್ Photo: x.com/ani_digital
ಚೆನ್ನೈ: ತಮಿಳುನಾಡು ರಾಜಕೀಯ ಇತಿಹಾಸದಲ್ಲಿ 59 ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಇಬ್ಬರು ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುತ್ತಿದ್ದು, ಗುರುವಾರ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ಸೇರಲಿದ್ದಾರೆ.
ಶಾಸಕರಾದ ರಾಜೇಶ್ ಕುಮಾರ್ ಮತ್ತು ಪಿ.ವಿಶ್ವನಾಥನ್ ಅವರನ್ನು ಟಿವಿಕೆ ನೇತೃತ್ವದ ಸರ್ಕಾರಕ್ಕೆ ಸಚಿವರಾಗಿ ನೇಮಕ ಮಾಡಿಕೊಳ್ಳುವ ಪ್ರಸ್ತಾವಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಪ್ಪಿಗೆ ನೀಡಿದ್ದು, ನೂತನ ಸಚಿವರು ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.
"ಇದು ನಮಗೆ ಐತಿಹಾಸಿಕ ಕ್ಷಣ. 59 ವರ್ಷಗಳ ಸುಧೀರ್ಘ ಅಂತರದ ಬಳಿಕ ತಮಿಳುನಾಡು ಸಂಪುಟಕ್ಕೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದೆ" ಎಂದು ವೇಣುಗೋಪಾಲ್ ಬಣ್ಣಿಸಿದ್ದಾರೆ.
ಡಿಎಂಕೆ ಸಂಸದ ಸಿ.ವಿ.ಷಣ್ಮುಗಂ ಜೂನ್ ನಲ್ಲಿ ನಿವೃತ್ತರಾಗುವ ಕಾರಣ ತೆರವಾಗುವ ರಾಜ್ಯಸಭಾ ಸ್ಥಾನದ ಮೇಲೂ ಕಾಂಗ್ರೆಸ್ ಕಣ್ಣಿಟ್ಟಿದ್ದು, ಮುಖ್ಯಮಂತ್ರಿ ವಿಜಯ್ ಜತೆ ಮಾತುಕತೆ ನಡೆಸುತ್ತಿದೆ. ಈ ದ್ವೈವಾರ್ಷಿಕ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿಕೂಟ ರಾಜ್ಯಸಭಾ ಸ್ಥಾನವನ್ನು ಗೆಲ್ಲುವ ನಿರೀಕ್ಷೆ ಇದೆ.
"ರಾಜ್ಯಸಭಾ ಸ್ಥಾನವನ್ನು ಬಿಟ್ಟುಕೊಡುವಂತೆ ಟಿವಿಕೆ ಜತೆ ಮಾತುಕತೆ ಮಾಡುತ್ತಿದ್ದೇವೆ. ಡಿಎಂಕೆ ಜತೆಗಿನ ಮೈತ್ರಿ ಕಡಿದುಕೊಂಡು ಕಾಂಗ್ರೆಸ್ ಹಾಗೂ ಟಿವಿಕೆಯನ್ನು ಪರಸ್ಪರ ಹತ್ತಿರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕರೊಬ್ಬರು ರಾಜ್ಯಸಭಾ ಸ್ಥಾನದ ಉಮೇದುವಾರಿಕೆಗೆ ಮುಂಚೂಣಿಯಲ್ಲಿದ್ದಾರೆ" ಎಂದು ಪಕ್ಷದ ಮೂಲಗಳು ಹೇಳಿವೆ.






