ನೀತಿ ಸಂಹಿತೆ ಉಲ್ಲಂಘನೆ ಆರೋಪ: ಮೋದಿ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್ ಮುಖಂಡ

PC: PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 18ರಂದು ದೂರದರ್ಶನ ಮತ್ತು ಸಂಸದ್ ಟಿವಿಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣ, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಆಪಾದಿಸಿ ಕಾಂಗ್ರೆಸ್ ಮುಖಂಡ ಟಿ.ಎನ್.ಪ್ರತಾಪನ್ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸುಪ್ರೀಂಕೋರ್ಟ್ ವೆಬ್ಸೈಟ್ ನಲ್ಲಿ ಈ ಅರ್ಜಿ ದಾಖಲಾಗಿದೆ. ಮೋದಿಯವರ ಭಾಷಣದಲ್ಲಿ ವಿರೋಧ ಪಕ್ಷಗಳನ್ನು ಟೀಕಿಸಿರುವುದು ನೀತಿಸಂಹಿತೆಯ ಉಲ್ಲಂಘನೆ ಎಂದು ಅವರು ದೂರಿದ್ದಾರೆ. 131ನೇ ಸಂವಿಧಾನ ತಿದ್ದಪಡಿ ಮಸೂದೆಗೆ (ಮಹಿಳಾ ಮೀಸಲಾತಿ) ಸೋಲುಂಟಾದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಟೀಕೆ ಮಾಡುವ ಮೂಲಕ ಹಾಲಿ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದಂತಾಗುತ್ತದೆ ಎಂದು ಅವರು ಆಪಾದಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಟಿವಿ ಚಾನಲ್ ಅನ್ನು ಪಕ್ಷದ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ರಾಜಕೀಯ ಭಾಷಣಕ್ಕೆ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ವ್ಯವಸ್ಥೆಯ ದುರುಪಯೋಗ ಎಂದು ಅವರು ವಾದಿಸಿದ್ದಾರೆ.
ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (7)ರ ಅಡಿಯಲ್ಲಿ ಭ್ರಷ್ಟ ಕ್ರಮ ಎಂಬ ವ್ಯಾಖ್ಯೆಯ ಅಡಿಯಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ. ಸರ್ಕಾರಿ ಯಂತ್ರವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವುದನ್ನು ಈ ಕಲಂ ನಿಷೇಧಿಸುತ್ತದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗಿದೆ ಎಂದು ವಿವರಿಸಲಾಗಿದೆ.






