"ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೊದಲ ದಿನ ಭಾರತಕ್ಕೆ ಸಂಪೂರ್ಣ ಸೋಲು": ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಹೇಳಿಕೆ

ಹೊಸದಿಲ್ಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್, ಆಪರೇಷನ್ ಸಿಂಧೂರ್ ಕಾರ್ಯಚರಣೆಯ ಮೊದಲ ದಿನ ಭಾರತ ಸಂಪೂರ್ಣವಾಗಿ ಸೋತಿದೆ ಎಂದು ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ.
ಪುಣೆಯಲ್ಲಿ ಮಾತನಾಡಿದ ಪೃಥ್ವಿರಾಜ್ ಚವಾಣ್, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೊದಲ ದಿನ ಭಾರತ ಹಿನ್ನಡೆ ಅನುಭವಿಸಿದೆ ಎಂದು ಹೇಳಿದ್ದಾರೆ.
"ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೊದಲ ದಿನ ನಾವು ಸಂಪೂರ್ಣವಾಗಿ ಸೋತಿದ್ದೇವೆ. ಅರ್ಧ ಗಂಟೆಯ ವೈಮಾನಿಕ ಕಾರ್ಯಾಚರಣೆಯಲ್ಲಿ, ಜನರು ಒಪ್ಪಿಕೊಂಡರೂ ಇಲ್ಲದಿದ್ದರೂ ನಾವು ಸಂಪೂರ್ಣವಾಗಿ ಸೋತಿದ್ದೇವೆ. ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ವಿಮಾನಗಳನ್ನು ಹೊಡೆದುರುಳಿಸುವ ಮೂಲಕ ವಾಯುಪಡೆಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಯಿತು. ಗ್ವಾಲಿಯರ್, ಬಟಿಂಡಾ ಅಥವಾ ಸಿರ್ಸಾದಿಂದ ಯಾವುದೇ ವಿಮಾನ ಹೊರಟಿದ್ದರೆ ಪಾಕಿಸ್ತಾನ ಅದನ್ನು ಹೊಡೆದುರುಳಿಸುವ ಸಾಧ್ಯತೆ ಇತ್ತು" ಎಂದು ಹೇಳಿದ್ದಾರೆ.
"ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಸಮಯದಲ್ಲಿ ನಾವು ನೋಡಿದ್ದೇವೆ. ಮಿಲಿಟರಿಯ ಒಂದು ಕಿಲೋಮೀಟರ್ ಚಲನೆಯೂ ಇರಲಿಲ್ಲ. ಎರಡು ಅಥವಾ ಮೂರು ದಿನಗಳಲ್ಲಿ ಏನೇ ನಡೆದರೂ ಅದು ಕೇವಲ ವೈಮಾನಿಕ ಯುದ್ಧ ಮತ್ತು ಕ್ಷಿಪಣಿ ಯುದ್ಧವಾಗಿತ್ತು. ಭವಿಷ್ಯದಲ್ಲಿ ಕೂಡ, ಯುದ್ಧಗಳು ಅದೇ ರೀತಿಯಲ್ಲಿ ನಡೆಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಾವು ನಿಜವಾಗಿಯೂ 12 ಲಕ್ಷ ಸೈನಿಕರ ಸೈನ್ಯವನ್ನು ನಿರ್ವಹಿಸುವ ಅಗತ್ಯವಿದೆಯೇ ಅಥವಾ ಅವರಿಂದ ಬೇರೆ ಏನಾದರೂ ಕೆಲಸ ಮಾಡಿಸಲು ನಾವು ಒತ್ತಾಯಿಸಬಹುದೇ" ಎಂದು ಪೃಥ್ವಿರಾಜ್ ಚವಾಣ್ ಪ್ರಶ್ನಿಸಿದ್ದಾರೆ.
ಚವಾಣ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ಕಾಂಗ್ರೆಸ್ ಪಕ್ಷ ಭಾರತೀಯ ಸಶಸ್ತ್ರ ಪಡೆಗಳನ್ನು ಪದೇ ಪದೇ ಅಗೌರವಿಸುತ್ತಿದೆ ಎಂದು ಆರೋಪಿಸಿದ್ದಾರೆ. "ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನೀಡಿದ ಹೇಳಿಕೆ ಆಘಾತಕಾರಿಯಾದುದು. ವಾಯುಪಡೆ ಮತ್ತು ಸಶಸ್ತ್ರ ಪಡೆಗಳನ್ನು ಅವರು ಗುರಿಯಾಗಿಸಿಕೊಂಡಿದ್ದಾರೆ" ಎಂದು ಶೆಹಜಾದ್ ಪೂನವಾಲಾ ಹೇಳಿದ್ದಾರೆ.







