ಯಮುನಾ ನದಿಗೆ ಪ್ಲಾಸ್ಟಿಕ್ ಬಾಟಲಿ ಎಸೆದ ಕಾಂಗ್ರೆಸ್ ನಾಯಕ| ಛತ್ ಭಕ್ತರ ನಂಬಿಕೆಗೆ ಅವಮಾನ; ಬಿಜೆಪಿ ಟೀಕೆ

ದೇವೇಂದ್ರ ಯಾದವ್ | Photo Credit : PTI
ಹೊಸದಿಲ್ಲಿ: ಛತ್ ಪೂಜೆ ಹಿನ್ನೆಲೆಯಲ್ಲಿ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದ್ದಾಗಲೇ ಕಾಂಗ್ರೆಸ್ ನಾಯಕ ದೇವೇಂದ್ರ ಯಾದವ್ ಅವರು ನದಿಗೆ ಪ್ಲಾಸ್ಟಿಕ್ ಬಾಟಲಿಯೊಂದನ್ನು ಎಸೆಯುತ್ತಿರುವ ವೀಡಿಯೋ ಬಹಿರಂಗವಾಗಿದೆ. ಇದನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ವೀಡಿಯೋ ಹಂಚಿಕೊಂಡಿರುವ ಬಿಜೆಪಿ, ಯಾದವ್ ಅವರ ಕೃತ್ಯವನ್ನು ಯಮುನಾ ನದಿಯನ್ನು ಕಲುಷಿತಗೊಳಿಸುವ 'ಲಜ್ಜೆಗೆಟ್ಟ ಪ್ರಯತ್ನ' ಎಂದು ಹೇಳಿದೆ. ಈ ಮೂಲಕ ಲಕ್ಷಾಂತರ ಛತ್ ಭಕ್ತರ ಧಾರ್ಮಿಕ ನಂಬಿಕೆಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದೂ ಆರೋಪಿಸಿದೆ.
'ಒಂದೆಡೆ ಬಿಜೆಪಿ ಸರಕಾರ ಯಮುನಾ ನದಿಯನ್ನು ಸ್ವಚ್ಛಗೊಳಿಸುತ್ತಿದೆ. ಛತ್ ಭಕ್ತರಿಗಾಗಿ ಭವ್ಯವಾದ ಘಾಟ್ ಗಳನ್ನು ನಿರ್ಮಿಸುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತೆ ಯಮುನಾ ನದಿಯನ್ನು ಕಲುಷಿತಗೊಳಿಸುವ ಕೆಲಸದಲ್ಲಿ ನಿರತವಾಗಿದೆ' ಎಂದು ಬಿಜೆಪಿ ಟೀಕಿಸಿದೆ.
ಛತ್ ಪೂಜೆಯ ಆಚರಣೆಗಳು ಮುಕ್ತಾಯಗೊಂಡ ಬೆನ್ನಲ್ಲೇ ಈ ವಿವಾದ ಉಂಟಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಭಕ್ತರು ನದಿಗಳು ಅಥವಾ ಇತರ ಜಲಮೂಲಗಳಲ್ಲಿ ನಿಂತು ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ದಿಲ್ಲಿಯಲ್ಲಿ ಛತ್ ಪೂಜೆಯ ಪ್ರಮುಖ ಸ್ಥಳಗಳಲ್ಲಿ ಯಮುನಾ ನದಿಯೂ ಒಂದಾಗಿದ್ದು, ಸಾವಿರಾರು ಭಕ್ತರು ನದಿಯ ದಡದಲ್ಲಿ ಸೇರಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.
ಆದರೆ, ಯಮುನಾ ನದಿಯ ಮಾಲಿನ್ಯವು ಛತ್ ಹಬ್ಬದ ಸಂದರ್ಭದಲ್ಲಿ ಪದೇಪದೇ ಕಳವಳಕ್ಕೆ ಕಾರಣವಾಗುತ್ತಿದೆ. ನದಿಯಲ್ಲಿ ವಿಷಕಾರಿ ನೊರೆ ಕಾಣಿಸಿಕೊಳ್ಳುವುದು ಮತ್ತು ನೀರಿನ ಕಳಪೆ ಗುಣಮಟ್ಟ ಪ್ರಮುಖ ಸಮಸ್ಯೆಗಳಾಗಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ನದಿಯನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡಿದ್ದು, ಪೂಜೆಗಾಗಿ ನಿಗದಿಪಡಿಸಿದ ಘಾಟ್ಗಳಲ್ಲಿ ಅಗತ್ಯ ಸಿದ್ಧತೆಗಳನ್ನೂ ನಡೆಸಿದ್ದಾರೆ.
ಸ್ವಚ್ಛತಾ ಕಾರ್ಯಗಳ ನಡುವೆಯೂ ಯಮುನಾ ನದಿಯ ಪ್ರಸ್ತುತ ಸ್ಥಿತಿಯು ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಗಂಭೀರ ಆತಂಕಕಾರಿ ವಿಷಯವಾಗಿ ಉಳಿದಿದೆ.






