ಸಿಎಂ ಹೆಸರಿಸದ ಕಾಂಗ್ರೆಸ್: ಮುಂದುವರಿದ ಕೇರಳ ಸಸ್ಪೆನ್ಸ್

ವಿ.ಡಿ ಸತೀಶನ್ | ಕೆ. ಸಿ ವೇಣುಗೋಪಾಲ್ | ರಮೇಶ್ ಚೆನ್ನಿತ್ತಲ x.com
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆದರೂ, ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿರುವ ಯುಡಿಎಫ್ನ ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್ ಸಿಎಂ ಅಭ್ಯರ್ಥಿಯನ್ನು ಘೋಷಿಸುವಲ್ಲಿ ವಿಳಂಬ ಮಾಡುತ್ತಿದ್ದು, ಕೇರಳ ಸಸ್ಪೆನ್ಸ್ ಮುಂದುವರಿದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಶೀಘ್ರವೇ ಸಿಎಂ ಅಭ್ಯರ್ಥಿಯನ್ನು ಘೋಷಿಸುತ್ತಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಸಿಎಂ ಗಾದಿಯ ರೇಸ್ನಲ್ಲಿ ಮುಂಚೂಣಿಯಲ್ಲಿರುವ ಮೂವರ ‘ಸಂದರ್ಶನ’ ಈಗಾಗಲೇ ಮುಗಿದಿದೆ ಎಂದು ತಿಳಿದುಬಂದಿದೆ.
ಪಕ್ಷದ ಹೈಕಮಾಂಡ್ ಮತ್ತು ಮೂವರು ಸಿಎಂ ಆಕಾಂಕ್ಷಿಗಳ ನಡುವಿನ ಸಭೆಯಲ್ಲಿ ಪಾಲ್ಗೊಂಡು ದೆಹಲಿಯಿಂದ ವಾಪಸ್ಸಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇರಳ ರಾಜ್ಯ ಘಟಕದ ಅಧ್ಯಕ್ಷ ಸನ್ನಿ ಜೋಸೆಫ್, ಈ ವಿಚಾರದಲ್ಲಿ ಇನ್ನೊಂದು ಸುತ್ತಿನ ಮಾತುಕತೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ವಿವಾದಾತ್ಮಕ ನಡೆಗಳಿಂದ ಹಿಂದೆ ಸರಿಯುವಂತೆ ಎಲ್ಲರಿಗೂ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು. ಆದರೆ ಸಿಎಂ ಹೆಸರನ್ನು ಯಾವಾಗ ಘೋಷಿಸಲಾಗುತ್ತದೆ ಎಂಬ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.
ಯುಡಿಎಫ್ ಅಂಗಪಕ್ಷಗಳ ಜತೆ ಈ ವಿಚಾರವನ್ನು ಚರ್ಚಿಸಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ, ಅದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಜೋಸೆಫ್ ಉತ್ತರಿಸಿದರು. ಆಯ್ಕೆ ಪ್ರಕ್ರಿಯೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಹಿರಿಯ ಮುಖಂಡ ಎ.ಕೆ. ಆ್ಯಂಟನಿ ಅವರ ಅಭಿಪ್ರಾಯ ನಿರ್ಣಾಯಕವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಸಿಎಂ ಹುದ್ದೆಯ ಆಕಾಂಕ್ಷಿಗಳಾಗಿರುವ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಹೀಗೆ ಮೂವರೂ ಆಶಾವಾದಿಗಳಾಗಿದ್ದು, ಅಂತಿಮ ನಿರ್ಧಾರ ತಮ್ಮ ಪರವಾಗಿಯೇ ಇರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಪಕ್ಷದ ಅತಿಹೆಚ್ಚು ಶಾಸಕರ ಅಭಿಪ್ರಾಯವನ್ನು ಪಕ್ಷದ ಹೈಕಮಾಂಡ್ ಗೌರವಿಸುತ್ತದೆ ಎಂಬ ವಿಶ್ವಾಸದಲ್ಲಿ ವೇಣುಗೋಪಾಲ್ ಬಣ ಇದೆ.






