ಬಿಹಾರ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ 48 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಗುರುವಾರ ರಾತ್ರಿ ಬಿಡುಗಡೆ ಮಾಡಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್ ಅವರು ಕುಟುಂಬಾ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.
ಕಾಂಗ್ರೆಸ್ ಒಂದು ದಿನ ಮೊದಲೇ ಮುಂದಿನ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಕೆಲ ಅಭ್ಯರ್ಥಿಗಳ ಹೆಸರನ್ನು ಪಕ್ಷದ ಬಿಹಾರ ಘಟಕದ ಅಧಿಕೃತ ಹ್ಯಾಂಡಲ್‍ನಲ್ಲಿ ಬಿಡುಗಡೆ ಮಾಡಲು ಆರಂಭಿಸಿತ್ತು. ನಾಮಪತ್ರ ಪ್ರಮಾಣಪತ್ರಗಳನ್ನು ಸ್ವೀಕರಿಸುವ ಅಭ್ಯರ್ಥಿಗಳ ಭಾವಚಿತ್ರಗಳನ್ನು ಕೂಡಾ ಪೋಸ್ಟ್ ಮಾಡಿತ್ತು.
ಮಹಾಘಟಬಂಧನದ ಮಿತ್ರ ಪಕ್ಷಗಳ ಸ್ಥಾನ ಹೊಂದಾಣಿಕೆ ಒಪ್ಪಂದ ಇನ್ನೂ ಅಧಿಕೃತವಾಗಿ ಅಂತಿಮಗೊಳ್ಳುವ ಮುನ್ನವೇ ಈ ಬೆಳವಣಿಗೆ ನಡೆದಿದೆ. ಮುಜಾಫರ್ ಪುರದಿಂದ ಭೂಪೇಂದ್ರ ಚೌಧರಿ, ಗೋಪಾಲ್‍ಗಂಜ್‍ನಿಂದ ಓಂ ಪ್ರಕಾಶ್ ಗರ್ಗ್, ಬೆಗುಸರಾಯ್ ಕ್ಷೇತ್ರದಿಂದ ಅಮಿತಾ ಭೂಷಣ್, ವಜೀರ್ ಗಂಜ್‍ನಿಂದ ಡಾ.ಶಶಿಶೇಖರ್ ಸಿಂಗ್, ನಳಂದಾ ಕ್ಷೇತ್ರದಿಂದ ಕೌಶೇಲೇಂದ್ರ ಕುಮಾರ್ ಹಾಗೂ ಔರಂಗಾಬಾದ್‍ನಿಂದ ಆನಂದ್ ಶಂಕರ್ ಸಿಂಗ್ ಅವರನ್ನು ಕಣಕ್ಕೆ ಇಳಿಸಲಾಗಿದೆ.
ಇದೇ ವೇಳೆ ಬಿಕ್ರಮ್‍ನಿಂದ ಅನಿಲ್ ಕುಮಾರ್, ಸುಲ್ತಾನ್‍ಗಂಜ್‍ನಿಂದ ಲಲನ್ ಕಮಾರ್, ಲಾಖಿಸರಾಯ್ ಕ್ಷೇಥ್ರದಿಂದ ಅಮರೇಶ್ ಕುಮಾರ್, ರೋಸ್ಡಾದಿಂದ ಬಿ.ಕೆ.ರವಿ, ಗೋವಿಂದಗಂಜ್‍ನಿಂದ ಶಶಿಭೂಷಣ್ ರಾಯ್, ಅಮರಪುರದಿಂದ ಜಿತೇಂದ್ರ ಸಿಂಗ್ ಮತ್ತು ಬಚ್ವಾರ ಕ್ಷೇತ್ರದಿಂದ ಗರೀಬ್ ದಾಸ್, ಬರ್ಬಿಗಾ ಕ್ಷೇತ್ರದಿಂದ ತ್ರಿಶೂಲಧಾರಿ ಸಿಂಗ್ ಸ್ಪರ್ಧಿಸುತ್ತಿದ್ದಾರೆ.







