ಟ್ರಂಪ್ ರ ‘ಕದನವಿರಾಮ’ ಘೋಷಣೆಯನ್ನು ಮೋದಿಗೆ ನೆನಪಿಸಿದ ಕಾಂಗ್ರೆಸ್

ಜೈರಾಮ್ ರಮೇಶ್ | PC : PTI
ಹೊಸದಿಲ್ಲಿ, ಸೆ.10: ಭಾರತ ಹಾಗೂ ಅಮೆರಿಕ ಸಹಜ ಪಾಲುದಾರರು ಎಂದು ಬಣ್ಣಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷ ಬುಧವಾರ ಟೀಕಿಸಿದೆ.
ಭಾರತ ಹಾಗೂ ಪಾಕಿಸ್ತಾನವು ಕದನವಿರಾಮವನ್ನು ಏರ್ಪಡಿಸಿಕೊಳ್ಳುವುದಕ್ಕೆ ವಾಣಿಜ್ಯವನ್ನು ಅಸ್ತ್ರವಾಗಿ ತಾನು ಬಳಸಿಕೊಂಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 35ಕ್ಕೂ ಹೆಚ್ಚಿನ ಸಂದರ್ಭಗಳಲ್ಲಿ ಘೋಷಿಸಿಕೊಂಡಿರುವಷ್ಟು ಮಟ್ಟಿಗೆ ಸಹಜವಾಗಿದೆಯೇ ಎಂದು ಕಟಕಿಯಾಡಿದೆ.
ಕಾಂಗ್ರೆಸ್ ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ‘‘ ಭಾರತ ಹಾಗೂ ಅಮೆರಿಕ ಸಹಜ ಪಾಲುದಾರರೆಂದುಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಗೆ ತಿಳಿಸಿದ್ದಾರೆ. .ಆದರೆ ಇಲ್ಲಿರುವ ಪ್ರಶ್ನೆಯೆಂದರೆ, ಮೇ 10ರ ಸಂಜೆ ಭಾರತ-ಪಾಕಿಸ್ತಾನ ಕದನವಿರಾಮ ಏರ್ಪಡಿಸುವುದಕ್ಕೆ ವಾಣಿಜ್ಯವನ್ನು ತಾನು ಕಡಿವಾಣವಾಗಿ ಬಳಸಿಕೊಂಡಿದ್ದೇನೆ ಎಂದು ಅಧ್ಯಕ್ಷ ಟ್ರಂಪ್ ಘೋಷಿಸಿಕೊಳ್ಳುವಷ್ಟು ಅವರ ಪಾಲುದಾರಿಕೆ ಸಹಜವಾಗಿದೆಯೇ’’ಎಂದು ಪ್ರಶ್ನಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ಕದನವಿರಾಮ ಏರ್ಪಡುವುದಕ್ಕೆ ತಾನೇ ಕಾರಣವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವಾರು ಸಂದರ್ಭಗಳಲ್ಲಿ ಹೇಳಿದ್ದರು. ಆದರೆ ಭಾರತ ಸರಕಾರ ಅದನ್ನು ಸ್ಪಷ್ಟವಾಗಿ ಅಲ್ಲಗಳೆದಿತ್ತು. ಪ್ರಧಾನಿ ಮೋದಿ ಅವರು ಕೂಡಾ ಆಪರೇಶನ್ ಸಿಂಧೂರ್ ಬಳಿಕ ಭಾರತ ಹಾಗೂ ಪಾಕ್ ನಡುವೆ ಕದನವಿರಾಮವನ್ನು ಏರ್ಪಡಿಸುವಲ್ಲಿ ಯಾವುದೇ ತೃತೀಯ ರಾಷ್ಟ್ರವು ಪಾತ್ರವಹಿಸಿರಲಿಲ್ಲವೆಂದು ತಿಳಿಸಿದ್ದರು.





