ಬೆದರಿಕೆ ರಾಜಕೀಯಕ್ಕಿಂತ ನ್ಯಾಯ ಮೇಲುಗೈ ಸಾಧಿಸುತ್ತದೆ: ಪವನ್ ಖೇರಾಗೆ ಬೆಂಬಲ ಸೂಚಿಸಿದ ಕಾಂಗ್ರೆಸ್

ಪವನ್ ಖೇರಾ (File Photo: PTI)
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಪವನ್ ಖೇರಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಪವನ್ ಖೇರಾ ಅವರಿಗೆ ಬೆಂಬಲವನ್ನು ಸೂಚಿಸಿದೆ. ಬೆದರಿಕೆ ಹಾಗೂ ಭಯ ಹುಟ್ಟಿಸುವ ರಾಜಕೀಯಕ್ಕಿಂತ ನ್ಯಾಯ ಮೇಲುಗೈ ಸಾಧಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು, ತಮ್ಮ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥರಾದ ಪವನ್ ಖೇರಾ ಅವರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ. ಗುವಾಹಟಿ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ. ಬೆದರಿಕೆ, ದಬ್ಬಾಳಿಕೆ, ಕಿರುಕುಳದ ರಾಜಕೀಯಕ್ಕಿಂತ ನ್ಯಾಯವು ಮೇಲುಗೈ ಸಾಧಿಸುತ್ತದೆ ಎಂದು ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಬಹು ಪಾಸ್ಪೋರ್ಟ್ ಹಾಗೂ ವಿದೇಶಿ ಆಸ್ತಿಗಳನ್ನೂ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದ ಪವನ್ ಖೇರಾ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಸಂಬಂಧ ಪವನ್ ಖೇರಾ ನಿರೀಕ್ಷಣಾ ಜಾಮೀನು ಕೋರಿ ಗುವಾಹಟಿ ಹೈಕೋರ್ಟ್ ಮೊರೆ ಹೋಗಿದ್ದರು.




