ಲೈಂಗಿಕ ದೌರ್ಜನ್ಯ ಆರೋಪ | ವಿಪಕ್ಷಗಳು ರಾಜೀನಾಮೆಗೆ ಒತ್ತಾಯಿಸುತ್ತಿದ್ದಂತೆ ರಾಹುಲ್ ಮಾಂಕೂಟತ್ತಿಲ್ ಬೆಂಬಲಕ್ಕೆ ನಿಂತ ಕಾಂಗ್ರೆಸ್

Photo | indiatoday
ತಿರುವನಂತಪುರಂ: ಲೈಂಗಿಕ ದೌರ್ಜನ್ಯದ ಆರೋಪದ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ರಾಹುಲ್ ಮಾಂಕೂಟತ್ತಿಲ್ ಅವರಿಗೆ ಸಿಪಿಎಂ ಮತ್ತು ಬಿಜೆಪಿ ಆಗ್ರಹಿಸಿದೆ. ಆದರೆ ಕಾಂಗ್ರೆಸ್ ರಾಹುಲ್ ಮಾಂಕೂಟತ್ತಿಲ್ ಅವರ ಬೆಂಬಲಕ್ಕೆ ನಿಂತಿದ್ದು, ವಿಪಕ್ಷಗಳ ರಾಜೀನಾಮೆ ಬೇಡಿಕೆಯನ್ನು ತಳ್ಳಿ ಹಾಕಿದೆ.
ಮಲಯಾಳಂ ನಟಿ ರಿನಿ ಜಾರ್ಜ್ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಗುರುವಾರ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬೆನ್ನಲ್ಲೆ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರು ರಾಹುಲ್ ಮಾಂಕೂಟತ್ತಿಲ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ನಟಿಯ ಆರೋಪದ ಬಳಿಕ ರಾಹುಲ್ ಮಾಂಕೂಟತ್ತಿಲ್ ಅವರು ಕೇರಳ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಕೇರಳ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪದಾಸ್ ಮುನ್ಶಿ, ಈ ಬಗ್ಗೆ ಯಾರಿಂದಲೂ ದೂರು ಬಂದಿಲ್ಲ. ಆದರೂ ಆರೋಪ ಬಂದ ತಕ್ಷಣ ರಾಹುಲ್ ಮಾಂಕೂಟತ್ತಿಲ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ಗೆ ನೈತಿಕತೆ ಮೊದಲು, ಇತರ ಪಕ್ಷಗಳು ಕೂಡ ಇದೇ ರೀತಿಯ ಮಾನದಂಡವನ್ನು ಅಳವಡಿಸಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.







