ಡಿಸೆಂಬರ್ 14ರಂದು ಮತಗಳ್ಳತನದ ವಿರುದ್ಧ ರಾಮ್ ಲೀಲಾ ಮೈದಾನದಲ್ಲಿ ಕಾಂಗ್ರೆಸ್ನಿಂದ ರ್ಯಾಲಿ

Photo | PTI
ಹೊಸದಿಲ್ಲಿ: ಡಿಸೆಂಬರ್ 14ರಂದು ಮತಗಳ್ಳನತದ ವಿರುದ್ಧ ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ರ್ಯಾಲಿ ನಡೆಸುವುದಾಗಿ ಕಾಂಗ್ರೆಸ್ ಹೇಳಿದೆ.
ಚುನಾವಣಾ ಆಯೋಗ ಪಕ್ಷಪಾತಿಯಾಗಿದ್ದು, ಚುನಾವಣೆಗಳ ಸಮಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಮಾನ ಹೋರಾಟದ ಪರಿಕಲ್ಪನೆಯನ್ನೇ ಸಂಪೂರ್ಣವಾಗಿ ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನಮ್ಮ ಸಂವಿಧಾನವನ್ನು ನಾಶಮಾಡುವ ಈ ಪ್ರಯತ್ನಗಳ ವಿರುದ್ಧ ದೇಶದಾದ್ಯಂತ ಸಂದೇಶವನ್ನು ಕಳುಹಿಸಲು ಡಿಸೆಂಬರ್ 14ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ 'ವೋಟ್ ಚೋರ್ ಗಡ್ಡಿ ಛೋಡ್' ಮಹಾ ರ್ಯಾಲಿಯನ್ನು ನಡೆಸಲಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನಕಲಿ ಮತದಾರರನ್ನು ಸೇರಿಸುವುದು, ವಿರೋಧ ಪಕ್ಷಗಳ ಬಗ್ಗೆ ಒಲವು ಹೊಂದಿರುವ ಮತದಾರರ ಹೆಸರನ್ನು ಅಳಿಸುವುದು, ಸಾಮೂಹಿಕವಾಗಿ ಮತದಾರರ ಪಟ್ಟಿಯನ್ನು ತಿರುಚುವ ಬಿಜೆಪಿ-ಚುನಾವಣಾ ಆಯೋಗದ ದುಷ್ಟ ತಂತ್ರಗಳನ್ನು ತಿರಸ್ಕರಿಸಿ, ಭಾರತದ ಮೂಲೆ ಮೂಲೆಗಳಿಂದ ನಮಗೆ ಕೋಟ್ಯಂತರ ಸಹಿಗಳು ಬಂದಿವೆ’ ಎಂದು ವೇಣುಗೋಪಾಲ್ ಹೇಳಿದ್ದಾರೆ.





