ನಿತೀಶ್ ವಿರುದ್ಧ ಸಂಚಿನ ಆರೋಪ: ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲಿಸುವೆ: ಲಲನ್ ಸಿಂಗ್
ಲಲನ್ ಸಿಂಗ್ | Photo: PTI
ಹೊಸದಿಲ್ಲಿ: ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಜೊತೆ ಹೆಚ್ಚುತ್ತಿರುವ ತನ್ನ ಒಡನಾಟದಿಂದಾಗಿ ತನ್ನನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷತೆಯಿಂದ ಉಚ್ಚಾಟಿಸಲಾಗಿದೆ ಎಂಬ ವರದಿಗಳನ್ನು ಮಾಜಿ ಜೆಡಿಯು ರಾಷ್ಟ್ರಾಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಅವರು ಶನಿವಾರ ಬಲವಾಗಿ ತಿರಸ್ಕರಿಸಿದರು.
ತನ್ನ ರಾಜೀನಾಮೆ ಕುರಿತಂತೆ ಕೆಲವು ದುರುದ್ದೇಶಪೂರಿತ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ ಎಂದು ಹೇಳಿಕೆಯಲ್ಲಿ ತಿಳಿಸಿದ ಅವರು, ಕಳೆದೊಂದು ವಾರದಿಂದಲೂ ನಮ್ಮ ಪಕ್ಷ ಜೆಡಿಯು ಮತ್ತು ನನ್ನ ಕುರಿತು ದಾರಿ ತಪ್ಪಿಸುವ ಮತ್ತು ಸುಳ್ಳು ಸುದ್ದಿಗಳನ್ನು ಒಂದು ವರ್ಗದ ಮಾಧ್ಯಮಗಳು ಪ್ರಕಟಿಸುತ್ತಿವೆ ಎಂದು ಆರೋಪಿಸಿದರು.
ತನ್ನ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವಿನ ೩೭ ವರ್ಷಗಳಷ್ಟು ಹಳೆಯ ಸಂಬಂಧವನ್ನು ಪ್ರಶ್ನಿಸುವ ಪ್ರಯತ್ನಗಳೂ ನಡೆದಿವೆ ಎಂದು ಆರೋಪಿಸಿದ ಅವರು, ಇಂತಹ ಸುಳ್ಳುಸುದ್ದಿಗಳನ್ನು ಹರಡುವ ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಕಾನೂನು ನೋಟಿಸ್ ನೀಡುತ್ತೇನೆ ಮತ್ತು ತನ್ನ ವರ್ಚಸ್ಸಿಗೆ ಕಳಂಕ ಹಚ್ಚುತ್ತಿರುವುದಕ್ಕಾಗಿ ಅವುಗಳ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುತ್ತೇನೆ ಎಂದು ತಿಳಿಸಿದರು.
ತಾನು ತೇಜಸ್ವಿ ಯಾದವ ಅವರೊಂದಿಗೆ ಸೇರಿಕೊಂಡು,ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂಬ ಎಲ್ಲ ವದಂತಿಗಳು ಮತ್ತು ಆರೋಪಗಳನ್ನು ತಿರಸ್ಕರಿಸಿದ ಸಿಂಗ್,ತಾನು ಡಿ.20ರಂದು ನಿತೀಶ್ ಅವರೊಂದಿಗೆ ದಿಲ್ಲಿಯಲ್ಲಿದ್ದು, ಅಲ್ಲಿಯ ಅವರ ನಿವಾಸದಲ್ಲಿ ಎಲ್ಲ ಸಂಸದರೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದೆ ಎಂದರು.
ಸಚಿವರೋರ್ವರ ಕಚೇರಿಯಲ್ಲಿ ಶಾಸಕರ ಸಭೆಯೊಂದನ್ನು ನಡೆಸಲಾಗಿತ್ತು ಎಂಬ ಮಾಧ್ಯಮ ವರದಿಗಳನ್ನು ನಿರಾಕರಿಸಿದ ಅವರು,ತಾನು ತನ್ನ ಲೋಕಸಭಾ ಕ್ಷೇತ್ರದಲ್ಲಿ ವ್ಯಸ್ತನಾಗಿರುವುದರಿಂದ ಪಕ್ಷಾಧ್ಯಕ್ಷತೆಗೆ ರಾಜೀನಾಮೆಯನ್ನು ಸಲ್ಲಿಸಿದ್ದೇನೆ ಮತ್ತು ಪಕ್ಷದ ಹೊಣೆಗಾರಿಕೆಯನ್ನು ನಿತೀಶ ಒಪ್ಪಿಗೆಯ ಮೇರೆಗೆ ಅವರಿಗೆ ಒಪ್ಪಿಸಿದ್ದೇನೆ ಎಂದು ಹೇಳಿದರು.