‘ವೀವ್ಸ್ ಹೆಚ್ಚಿಸುವಂತೆ ನಿರಂತರ ಒತ್ತಡ’: ನೇಹಾ ಸಿಂಗ್ ರಾಥೋಡ್ ರನ್ನು ‘ಸೆಕ್ಸ್ ರಾಕೆಟ್’ಗೆ ಲಿಂಕ್ ಮಾಡುವ ಸುಳ್ಳು ವೀಡಿಯೊ ಪೋಸ್ಟ್; ABP ನ್ಯೂಸ್ ನ ಮೂವರು ಉದ್ಯೋಗಿಗಳ ವಜಾ

Photo: x.com/BestMediaInfo
ಹೊಸದಿಲ್ಲಿ, ಅ.21: ಗಾಯಕಿ ನೇಹಾ ಸಿಂಗ್ ರಾಥೋಡ್ ಅವರನ್ನು ಲೈಂಗಿಕ ಜಾಲವೊಂದಕ್ಕೆ ಲಿಂಕ್ ಮಾಡುವ ಸುಳ್ಳು ವೀಡಿಯೊ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ABP ನ್ಯೂಸ್ ನ ಮೂವರು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿ ಚಾನೆಲ್ ಕ್ಷಮೆಯಾಚಿಸಿದ್ದು, ರಾಷ್ಟ್ರೀಯ ಮಹಿಳಾ ಆಯೋಗ (NCW) ಪ್ರಕರಣವನ್ನು ಪರಿಶೀಲನೆ ನಡೆಸುತ್ತಿದೆ ಎಂದು newslaundry.com ವರದಿ ಮಾಡಿದೆ.
ವಜಾಗೊಂಡವರಲ್ಲಿ ನಿರ್ಮಾಣ ವಿಭಾಗದ ಮುಖ್ಯಸ್ಥರು, ವೀಡಿಯೊ ಸಿದ್ಧಪಡಿಸಿದ ವ್ಯಕ್ತಿ ಹಾಗೂ ಯೂಟ್ಯೂಬ್ ವಿಭಾಗದ ಶಿಫ್ಟ್ ಉಸ್ತುವಾರಿ ಸೇರಿದ್ದಾರೆ ಎಂದು ಚಾನೆಲ್ ನ ಮೂಲಗಳು ತಿಳಿಸಿವೆ. ವೀವ್ಸ್ ಗಳನ್ನು ಹೆಚ್ಚಿಸಬೇಕೆಂಬ ನಿರಂತರ ಒತ್ತಡದಿಂದಾಗಿ ನ್ಯೂಸ್ರೂಮ್ ನಲ್ಲಿ ಈ ಪ್ರಮಾದ ಸಂಭವಿಸಿದೆ ಎಂದು ಮೂಲವೊಂದು ಹೇಳಿದೆ.
ABP ನ್ಯೂಸ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಜನೀಶ್ ಅಹುಜಾ ಅವರನ್ನು ನೇಹಾ ಫೋನ್ ನಲ್ಲಿ ತರಾಟೆಗೆ ತೆಗೆದುಕೊಂಡು, ಅವರೊಂದಿಗಿನ ಸಂಭಾಷಣೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಕಟಿಸಿದ ಬಳಿಕ ಚಾನೆಲ್ ಕ್ಷಮೆಯಾಚಿಸಿದೆ. ಮಾನಹಾನಿಕರ ವೀಡಿಯೊ ಪ್ರಸಾರವಾದ ಬಳಿಕ ನೇಹಾ, ಬಿಜೆಪಿಯ ಹಿರಿಯ ಸಚಿವರು ಹಾಗೂ ರಾಷ್ಟ್ರೀಯ ಮಹಿಳಾ ಆಯೋಗವನ್ನು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ ಟ್ಯಾಗ್ ಮಾಡಿದ್ದರು. ಪ್ರಕರಣವನ್ನು ಪರಿಶೀಲಿಸುತ್ತಿರುವುದಾಗಿ NCW ಬಳಿಕವೂ ತಿಳಿಸಿದೆ.
ನೇಹಾ ಅವರು ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ಹಳೆಯ ಫೋಟೊ ಬಳಸಿ ನಕಲಿ ಸುದ್ದಿ
ನೇಹಾ ಅವರನ್ನು ಲೈಂಗಿಕ ಜಾಲಕ್ಕೆ ಸಂಪರ್ಕಿಸುವ ಸುಳ್ಳು ವೀಡಿಯೊವನ್ನು ಮೊದಲು ‘ಹಿಂದೂಸ್ತಾನ್ ಕಿ ಆರ್ಮಿ’ ಎಂಬ ಎಕ್ಸ್ ಖಾತೆಯಲ್ಲಿ ಪ್ರಕಟಿಸಲಾಗಿತ್ತು. ‘ಬಿಗ್ ಬ್ರೇಕಿಂಗ್ ನ್ಯೂಸ್’ ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾದ ಪೋಸ್ಟ್ ನಲ್ಲಿ, ನೇಹಾ ವಾಸಿಸುತ್ತಿದ್ದ ಹಾಸ್ಟೆಲ್ ನಲ್ಲಿ ಲೈಂಗಿಕ ಜಾಲವೊಂದು ಕಾರ್ಯನಿರ್ವಹಿಸುತ್ತಿದ್ದು, ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ವೀಡಿಯೊದಲ್ಲಿನ ದೃಶ್ಯಗಳು 2024ರಲ್ಲಿ ಸ್ಪಾ ಕೇಂದ್ರವೊಂದರ ಮೇಲೆ ನಡೆದ ದಾಳಿಗೆ ಸಂಬಂಧಿಸಿದ್ದವು ಎಂದು ವರದಿಯಾಗಿದೆ.
ಇದೇ ವೀಡಿಯೊವನ್ನು ABP ನ್ಯೂಸ್ ತನ್ನ ಯೂಟ್ಯೂಬ್ ಶಾರ್ಟ್ಸ್ ವಿಭಾಗದಲ್ಲೂ ಪ್ರಕಟಿಸಿತ್ತು.
‘ನ್ಯೂಸ್ಲಾಂಡ್ರಿ’ಯೊಂದಿಗೆ ಮಾತನಾಡಿದ ನೇಹಾ, ವೀಡಿಯೊದಲ್ಲಿ ಬಳಸಲಾದ ಫೋಟೋ ಮೂರು ವರ್ಷಗಳ ಹಿಂದೆ ABP ನ್ಯೂಸ್ ವಾಹಿನಿಯೇ ತೆಗೆದಿತ್ತು ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಭಾಗವಹಿಸಲು ಅತಿಥಿಯಾಗಿ ವಾಹಿನಿಗೆ ತೆರಳಿದ್ದಾಗ ಈ ಫೋಟೊ ತೆಗೆದುಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.
“ಸಂದರ್ಶನಕ್ಕಾಗಿ ನನ್ನನ್ನು ಅತಿಥಿಯಾಗಿ ಆಹ್ವಾನಿಸಿದಾಗ ಅವರು ಈ ಫೋಟೊ ತೆಗೆದಿದ್ದರು. ಮೂರು ವರ್ಷಗಳ ಹಿಂದೆ ತೆಗೆದ ಫೋಟೊವನ್ನು ಈಗ ಈ ವಿಡಿಯೊದಲ್ಲಿ ಬಳಸಿದ್ದಾರೆ. ಇವರ ಧೈರ್ಯವನ್ನು ಮೆಚ್ಚಲೇಬೇಕು!” ಎಂದು ನೇಹಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾನೆಲ್ ಕ್ಷಮೆಯಾಚಿಸಿದರೂ, ತಮಗಾದ ಕಿರುಕುಳದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
“ಈ ಕ್ಷಮಾಪಣೆಯಿಂದ ನನಗೇನು ಪ್ರಯೋಜನ? ನನ್ನ ಘನತೆಗೆ ಧಕ್ಕೆ ತರಲಾಗಿದೆ” ಎಂದು ಕಿಡಿ ಕಾರಿದ್ದಾರೆ. ಇದು ಸಣ್ಣ ತಪ್ಪು ಅಥವಾ ಪ್ರಮಾದವಲ್ಲ ಎಂದು ಸ್ಪಷ್ಟಪಡಿಸಿರುವ ಅವರು, “ಇದು ಕೇವಲ ಟೈಪಿಂಗ್ ದೋಷವೋ ಅಥವಾ ಹೆಸರಿನ ಕಾಗುಣಿತದಲ್ಲಿನ ತಪ್ಪೋ ಅಲ್ಲ. ವಾಹಿನಿಯು ನನ್ನ ಫೋಟೊ ಬಳಸಿದ್ದಲ್ಲದೆ, ವೀಡಿಯೊದಲ್ಲಿ ನನ್ನ ಹೆಸರನ್ನು ಉಲ್ಲೇಖಿಸುವ ಪಠ್ಯವನ್ನೂ ಸೇರಿಸಿತ್ತು” ಎಂದು ಹೇಳಿದ್ದಾರೆ.
ವೀಕ್ಷಣೆಗಳಿಗಾಗಿ ಒತ್ತಡ
ABP ನ್ಯೂಸ್ನ ಆಂತರಿಕ ಮೂಲವೊಂದು ನ್ಯೂಸ್ರೂಮ್ನಲ್ಲಿನ ಒತ್ತಡದ ಕುರಿತು ಮಾಹಿತಿ ನೀಡಿದೆ.
“ವೀಕ್ಷಣೆಗಳನ್ನು ಪಡೆಯಬೇಕೆಂಬ ಒತ್ತಡ ಎಷ್ಟಿದೆಯೆಂದರೆ, ಅನುಭವ ಹೊಂದಿರುವ ಉತ್ತಮ ನಿರ್ಮಾಪಕರೂ ಶಾರ್ಟ್ಸ್ ವೀಡಿಯೊಗಳನ್ನು ಎಡಿಟ್ ಮಾಡುತ್ತಿದ್ದಾರೆ. ಐವರು ಉದ್ಯೋಗಿಗಳನ್ನು ಹೊಂದಿರುವ ಶಾರ್ಟ್ಸ್ ತಂಡವೇ ಈ ವೀಡಿಯೊ ಸಿದ್ಧಪಡಿಸಿದೆ. ಡೇಟಾ ವಿಭಾಗವು ಪ್ರತಿ ಗಂಟೆಗೊಮ್ಮೆ ಮಾಹಿತಿ ಕೇಳುತ್ತದೆ. ಈ ಒತ್ತಡದಿಂದಾಗಿ ನ್ಯೂಸ್ರೂಮ್ನಲ್ಲಿ ಗೊಂದಲದ ವಾತಾವರಣ ಹೆಚ್ಚಾಗಿದೆ” ಎಂದು ಮೂಲ ತಿಳಿಸಿದೆ.
ಸಿಬ್ಬಂದಿ ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಯೂಟ್ಯೂಬ್ ತಂಡವನ್ನು ವೀಕ್ಷಕರ ತೊಡಗಿಸಿಕೊಳ್ಳುವಿಕೆಯನ್ನು ಅಳೆಯುವ ಮಾನದಂಡಗಳ ಕುರಿತು ನಿರಂತರವಾಗಿ ಪ್ರಶ್ನಿಸಲಾಗುತ್ತಿದೆ ಎಂದೂ ಮೂಲ ಹೇಳಿದೆ.
‘ನ್ಯೂಸ್ಲಾಂಡ್ರಿ’ಯು ರಜನೀಶ್ ಅಹುಜಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅವರಿಗೆ ಇಮೇಲ್ ಮೂಲಕ ಪ್ರಶ್ನೆಗಳನ್ನು ಕಳುಹಿಸಲಾಗಿದೆ. ಅವರ ಪ್ರತಿಕ್ರಿಯೆ ಲಭ್ಯವಾದರೆ ವರದಿಯನ್ನು ನವೀಕರಿಸಲಾಗುವುದು ಎಂದು ನ್ಯೂಸ್ಲಾಂಡ್ರಿ ತಿಳಿಸಿದೆ.






