ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆ, ಭೂಕುಸಿತ; ಐದು ಮಂದಿ ಮೃತ್ಯು

PC: x.com/LokmatTimes_ngp
ಕುಲ್ಲು: ಸೋಮವಾರ ರೆಡ್ ಅಲರ್ಟ್ ಘೋಷಣೆಯಾಗಿದ್ದ ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ನಿರಂತರ ಮಳೆಯಿಂದ ಐದು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 1200ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ನೀರು ಮತ್ತು ವಿದ್ಯುತ್ ವ್ಯವಸ್ಥೆಗೂ ಧಕ್ಕೆಯಾಗಿದೆ.
ಶಿಮ್ಲಾ ಜಿಲ್ಲೆಯ ಜುಂಗಾ ಎಂಬಲ್ಲಿ ಭೂಕುಸಿತದಲ್ಲಿ ಮನೆಯ ಮೇಲೆ ಮಣ್ಣಿನ ರಾಶಿ ಬಿದ್ದು, 35 ವರ್ಷದ ವ್ಯಕ್ತಿ ಹಾಗೂ ಅವರ 10 ವರ್ಷದ ಪುತ್ರಿ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ವೀರೇಂದ್ರ ಕುಮಾರ್ (35) ಹಾಗೂ ಪುತ್ರಿ ಚುಟ್ಕಿ (10) ಎಂದು ಗುರುತಿಸಲಾಗಿದೆ. ಭೂಕುಸಿತ ಸಂಭವಿಸಿದಾಗ ಮನೆಯ ಹೊರಗೆ ಇದ್ದ ಕಾರಣ ಪತ್ನಿ ಉಳಿದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಿಮ್ಲಾದ ಕೊಟ್ಕಾಯಿ ಗ್ರಾಮದ ಛೋಲ್ ನಲ್ಲಿ ಮನೆಯ ಮೇಲೆ ಬಿದ್ದ ಭಾರಿ ಮಣ್ಣಿನ ರಾಶಿಯಡಿ ಸಿಕ್ಕಿಹಾಕಿಕೊಂಡ, ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಆಕೆಯನ್ನು ರಕ್ಷಿಸಲು ಸ್ಥಳೀಯರು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಅವಶೇಷಗಳ ಅಡಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.
ಶಿಮ್ಲಾ ಜಿಲ್ಲೆಯ ಬೋಲಿ ಗ್ರಾಮದಲ್ಲಿ ಭೂಕುಸಿತದಿಂದ ಮನೆಯ ಗೋಡೆ ಕುಸಿದು 23 ವರ್ಷದ ಮಹಿಳೆ ಮೃತಪಟ್ಟಿರುವ ಮತ್ತೊಂದು ಘಟನೆ ವರದಿಯಾಗಿದೆ. ಇಂಥದ್ದೇ ಇನ್ನೊಂದು ಘಟನೆಯಲ್ಲಿ ಸಿರ್ಮೂರ್ ಜಿಲ್ಲೆಯ ನೊಹ್ರಾದಾ ತಾಲೂಕು ಚೌರಾಸ್ ಎಂಬ ಗ್ರಾಮದಲ್ಲಿ 37 ವರ್ಷದ ಮಹಿಳೆಯೊಬ್ಬರು ಜೀವ ಕಳೆದುಕೊಂಡಿದ್ದಾರೆ. ಮೃತಪಟ್ಟ ಮಹಿಳೆಯನ್ನು ಶೀಲಾದೇವಿ ಎಂದು ಗುರುತಿಸಲಾಗಿದ್ದು, ಪತಿ ಹಾಗೂ ಮಕ್ಕಳ ಜತೆ ಮಲಗಿದ್ದ ವೇಳೆ ಮನೆಯ ಮೇಲೆ ಭೂಕುಸಿತದಿಂದ ಮಣ್ಣಿನ ರಾಶಿ ಬಿದ್ದಿದೆ.







