ಚಂದ್ರಶೇಖರನ್ ಮರುನೇಮಕ ವಿವಾದ: TATA ಸನ್ಸ್ ಮಂಡಳಿ ಸಭೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ
ನ. 30ರಂದು ನಿಗದಿಯಂತೆ ಸಭೆ ನಡೆಸಲು ಅನುಮತಿ

Photo: x.com/IndiaToday
ಮುಂಬೈ, ನ. 28: ಟಾಟಾ ಸನ್ಸ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಮೂರನೇ ಐದು ವರ್ಷಗಳ ಅವಧಿಯ ಮರುನೇಮಕವನ್ನು ಪ್ರಶ್ನಿಸಿ ಟಾಟಾ ಟ್ರಸ್ಟ್ಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯಲ್ಲಿ, ನ. 30ರಂದು ನಡೆಯಲಿರುವ ಕಂಪೆನಿಯ ಮಂಡಳಿ ಸಭೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇದರಿಂದ ನಿಗದಿಯಂತೆ ಸಭೆ ನಡೆಸಲು ಟಾಟಾ ಸನ್ಸ್ಗೆ ಅವಕಾಶ ದೊರೆತಿದೆ.
ನ್ಯಾ. ಅಭಯ್ ಅಹುಜಾ ಅವರಿದ್ದ ಪೀಠವು, ಟಾಟಾ ಸನ್ಸ್ ತನ್ನ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡುವುದಾಗಿ ತಿಳಿಸಿತು. ಆದರೆ, ಅರ್ಜಿದಾರರು ಕೋರಿದ್ದ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತು.
ಸಭೆಯಲ್ಲಿ ಕೈಗೊಳ್ಳುವ ಯಾವುದೇ ನಿರ್ಧಾರವು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಪೀಠ ಸ್ಪಷ್ಟಪಡಿಸಿತು. "ನಾವು ಇಂದು ಯಾವುದೇ ಪರಿಹಾರ ನೀಡುತ್ತಿಲ್ಲ. ನ. 30ರಂದು ನಡೆಯಲಿರುವ ಸಭೆಯು ನಿಗದಿಯಂತೆ ನಡೆಯಲಿ. ಸಭೆಯ ಯಾವುದೇ ಫಲಿತಾಂಶವು ನಮ್ಮ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ" ಎಂದು ನ್ಯಾಯಾಲಯ ಹೇಳಿತು.
ಸಭೆಗೆ ತಡೆ ನೀಡಬೇಕು ಅಥವಾ ಮುಂದೂಡಬೇಕು ಎಂಬುದು ಟಾಟಾ ಟ್ರಸ್ಟ್ಸ್ ನ ಪ್ರಮುಖ ಮನವಿಯಾಗಿತ್ತು. ಅಲ್ಲದೆ, ನಾಮನಿರ್ದೇಶಿತ ನಿರ್ದೇಶಕರ ನಡುವೆ ಭಿನ್ನಾಭಿಪ್ರಾಯ ಉಂಟಾದರೆ, ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ಚಂದ್ರಶೇಖರನ್ ಅವರು ನಿರ್ಣಾಯಕ ಮತ (ಕಾಸ್ಟಿಂಗ್ ವೋಟ್) ಚಲಾಯಿಸದಂತೆ ನಿರ್ಬಂಧ ವಿಧಿಸಬೇಕು ಎಂದೂ ಟ್ರಸ್ಟ್ ಗಳು ಕೋರಿದ್ದವು.
►ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್
ಸರ್ ದೊರಾಬ್ಜಿ ಟಾಟಾ ಟ್ರಸ್ಟ್ (SDTT) ಮತ್ತು ಆರ್.ಡಿ. ಟಾಟಾ ಟ್ರಸ್ಟ್ (RDTT) ಸಂಸ್ಥೆಗಳು ಟಾಟಾ ಸನ್ಸ್ ಹಾಗೂ ಅದರ ಆರು ನಿರ್ದೇಶಕರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ಹೂಡಿವೆ. ಚಂದ್ರಶೇಖರನ್ ಅವರನ್ನು ಮೂರನೇ ಐದು ವರ್ಷಗಳ ಅವಧಿಗೆ ಮರುನೇಮಕ ಮಾಡಿರುವುದನ್ನು ಈ ದಾವೆಗಳಲ್ಲಿ ಪ್ರಶ್ನಿಸಲಾಗಿದೆ.
ಸೆ. 17ರಂದು ಟಾಟಾ ಸನ್ಸ್ ಮಂಡಳಿಯು ಚಂದ್ರಶೇಖರನ್ ಅವರ ಮರುನೇಮಕಕ್ಕೆ ನಿರ್ಣಯ ಕೈಗೊಂಡಿತ್ತು. ಆದರೆ, ಕಂಪೆನಿಯ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ (AoA)ನ 121ನೇ ವಿಧಿಯ ಪ್ರಕಾರ ಅಗತ್ಯವಿರುವಷ್ಟು ಬೆಂಬಲ ಮತಗಳು ದೊರೆತಿಲ್ಲ. ಹೀಗಾಗಿ, ಮರುನೇಮಕದ ನಿರ್ಣಯ ಅಸಿಂಧು ಎಂದು ಟ್ರಸ್ಟ್ ಗಳು ವಾದಿಸಿವೆ.
ಈ ವಿವಾದಕ್ಕೆ ಸಂಬಂಧಿಸಿದಂತೆ SDTT 50 ಕೋಟಿ ರೂ. ಪರಿಹಾರ ಕೋರಿದೆ. RDTT ವಾರ್ಷಿಕ ಶೇ. 18ರಷ್ಟು ಬಡ್ಡಿಯೊಂದಿಗೆ 15 ಕೋಟಿ ರೂ. ಪರಿಹಾರ ನೀಡುವಂತೆ ಮನವಿ ಮಾಡಿದೆ.
►RBI ಗಡುವಿನ ಪ್ರಸ್ತಾಪ ಮುಂದಿಟ್ಟ ಟಾಟಾ ಸನ್ಸ್
ಶುಕ್ರವಾರದ ವಿಚಾರಣೆ ವೇಳೆ ನ. 30ರಂದು ನಿಗದಿಯಾಗಿರುವ ಮಂಡಳಿ ಸಭೆಯನ್ನು ಮುಂದೂಡುವಂತೆ ಟ್ರಸ್ಟ್ಗಳ ಪರ ವಕೀಲರು ಮನವಿ ಮಾಡಿದರು. ಆದರೆ, ಟಾಟಾ ಸನ್ಸ್ ಇದನ್ನು ವಿರೋಧಿಸಿತು.
ಕಂಪೆನಿಯ ಮಂಡಳಿ ಸಭೆ ನಡೆಸುವುದು ಅನಿವಾರ್ಯ ಎಂದು ಟಾಟಾ ಸನ್ಸ್ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದಿಸಿದರು. ಷೇರು ಮಾರುಕಟ್ಟೆಯಲ್ಲಿ ನೋಂದಣಿಗೆ ಸಂಬಂಧಿಸಿದ ಕಡ್ಡಾಯ ನಿಯಮದ ಕುರಿತು ಡಿ. 12ರೊಳಗೆ ಭಾರತೀಯ ರಿಸರ್ವ್ ಬ್ಯಾಂಕ್ಗೆ (RBI) ಮಾಹಿತಿ ನೀಡಬೇಕಿರುವುದರಿಂದ ಸಭೆ ನಡೆಸುವುದು ಅಗತ್ಯವಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಸಭೆಯಲ್ಲಿ ಕೈಗೊಳ್ಳುವ ಯಾವುದೇ ನಿರ್ಣಯವು ಹೈಕೋರ್ಟ್ನ ಆದೇಶಗಳಿಗೆ ಒಳಪಟ್ಟಿರುತ್ತದೆ ಎಂದೂ ಸಾಳ್ವೆ ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಯಾಗಿ, ಸರ್ ದೊರಾಬ್ಜಿ ಟಾಟಾ ಟ್ರಸ್ಟ್ (SDTT) ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. RBI ನಿರ್ದೇಶನವನ್ನು ನೆಪವಾಗಿಟ್ಟುಕೊಂಡು ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಲು ಹಾಗೂ ಮಂಡಳಿ ಸಭೆ ನಡೆಸಲು ಟಾಟಾ ಸನ್ಸ್ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ತಮ್ಮ ಪ್ರತಿಕ್ರಿಯೆಗಳನ್ನು (Reply Affidavits) ಸಲ್ಲಿಸುವಂತೆ ಟಾಟಾ ಸನ್ಸ್ ಮತ್ತು ಮಂಡಳಿ ಸದಸ್ಯರು ಸೇರಿದಂತೆ ಇತರ ಪ್ರತಿವಾದಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಜ. 21ಕ್ಕೆ ನಿಗದಿಪಡಿಸಲಾಗಿದೆ.






