"ಮತಗಳ ಕಳ್ಳತನ" ಆರೋಪಿಸಿ ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ : ರಾಹುಲ್ ಗಾಂಧಿ ಸಹಿತ ಹಲವು ವಿಪಕ್ಷಗಳ ಸಂಸದರು ಪೊಲೀಸ್ ವಶಕ್ಕೆ

Photo | ANI
ಹೊಸದಿಲ್ಲಿ : ಮತಗಳ ಕಳ್ಳತನ ಆರೋಪ ಮತ್ತು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಖಂಡಿಸಿ ಮೆರವಣಿಗೆ ವೇಳೆ ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಸಂಸದರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
“ನಮ್ಮ ಧ್ವನಿಯನ್ನು ಮುಚ್ಚಲು ಸಾಧ್ಯವಿಲ್ಲ. ಸತ್ಯ ದೇಶದ ಮುಂದಿದೆ. ಈ ಹೋರಾಟ ರಾಜಕೀಯವಲ್ಲ; ಇದು ಸಂವಿಧಾನ ಉಳಿಸುವ ಹೋರಾಟ. ಪ್ರತಿಯೊಬ್ಬ ನಾಗರಿಕನಿಗೂ ಸ್ವಚ್ಛ, ಶುದ್ಧ ಮತದಾರರ ಪಟ್ಟಿ ಸಿಗಬೇಕು” ಎಂದು ರಾಹುಲ್ ಗಾಂಧಿ ಘೋಷಿಸಿದರು.
ಭಾರತೀಯ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ ‘ಮತಗಳ್ಳತನ’ ಆರೋಪಗಳ ವಿರುದ್ಧ ವಿರೋಧ ಪಕ್ಷಗಳ ಭಾರೀ ಪ್ರತಿಭಟನಾ ಮೆರವಣಿಗೆ ನಡೆಯಿತು. ಕಾಂಗ್ರೆಸ್ ಸೇರಿದಂತೆ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ಪ್ರತಿಭಟನೆಗೆ ಪೊಲೀಸರು ತಡೆಗಟ್ಟಿದ್ದು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಸಂಜಯ್ ರಾವತ್, ಸಾಗರಿಕಾ ಘೋಷ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ವಶಕ್ಕೆ ತೆಗೆದುಕೊಂಡರು.







