ಭ್ರಷ್ಟಾಚಾರ, ಜಾತಿವಾದ ಮತ್ತು ಕೋಮುವಾದಕ್ಕೆ ಭಾರತದಲ್ಲಿ ಅವಕಾಶವಿರದು: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ | Photo: PTI
ಹೊಸದಿಲ್ಲಿ: ‘ಭಾರತವು 2047ರಲ್ಲಿ ತನ್ನ ಸ್ವಾತಂತ್ರ್ಯದ 100ನೇ ವರ್ಷವನ್ನು ಆಚರಿಸುವಾಗ ಅಭಿವೃದ್ಧಿ ಹೊಂದಿದ ದೇಶವಾಗಿರಲಿದೆ ಮತ್ತು ಭ್ರಷ್ಟಾಚಾರ, ಜಾತಿವಾದ ಹಾಗೂ ಕೋಮುವಾದಕ್ಕೆ ನಮ್ಮ ರಾಷ್ಟ್ರದಲ್ಲಿ ಯಾವುದೇ ಅವಕಾಶವಿರುವುದಿಲ್ಲ ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಹೇಳಿದರು.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆ ಕುರಿತು ಮಾತನಾಡಿದ ಅವರು,‘ಇಂದು ವಿಶ್ವವು ಮಾರ್ಗದರ್ಶನಕ್ಕಾಗಿ ಭಾರತದತ್ತ ನೋಡುತ್ತಿದೆ. ವಿಶ್ವವು ನಮ್ಮ ಮಾತುಗಳು ಮತ್ತು ಮುನ್ನೋಟವನ್ನು ಭವಿಷ್ಯಕ್ಕೆ ಮಾರ್ಗಸೂಚಿಯನ್ನಾಗಿ ನೋಡುತ್ತಿದೆ, ಕೇವಲ ಕಲ್ಪನೆಗಳನ್ನಾಗಿ ಅಲ್ಲ ’ಎಂದು ಹೇಳಿದರು.
ವಿಶ್ವದ ಜಿಡಿಪಿ-ಕೇಂದ್ರಿತ ದೃಷ್ಟಿಕೋನವು ಮಾನವ-ಕೇಂದ್ರಿತ ದೃಷ್ಟಿಕೋನವಾಗಿ ಬದಲಾಗುತ್ತಿದೆ ಮತ್ತು ಈ ಪರಿವರ್ತನೆಯಲ್ಲಿ ಭಾರತವು ವೇಗವರ್ಧಕದ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರು. ಭಾರತದ ಕುರಿತು ವಿಶ್ವದ ದೃಷ್ಟಿಕೋನವು ಹೇಗೆ ಬದಲಾಗುತ್ತಿದೆ ಎನ್ನುವುದನ್ನು ಒತ್ತಿ ಹೇಳಿದ ಮೋದಿ, ದೀರ್ಘಕಾಲದಿಂದ ಭಾರತವನ್ನು ಶತಕೋಟಿ ಹಸಿದ ಹೊಟ್ಟೆಗಳ ದೇಶವನ್ನಾಗಿ ನೋಡಲಾಗುತ್ತಿತ್ತು.
ಈಗ ಅದು ಒಂದು ಶತಕೋಟಿ ಮಹತ್ವಾಕಾಂಕ್ಷಿ ಮನಸ್ಸುಗಳು ಮತ್ತು ಎರಡು ಶತಕೋಟಿ ಕೌಶಲ್ಯಪೂರ್ಣ ಕೈಗಳನ್ನು ಹೊಂದಿರುವ ದೇಶವಾಗಿದೆ ಎಂದು ನುಡಿದರು. ಮುಂದಿನ ಕೆಲವು ದಶಕಗಳಲ್ಲಿ ಭಾರತದ ಜನಸಂಖ್ಯೆಯು ದೇಶವು ಜನಸಂಖ್ಯಾ ಲಾಭಾಂಶವನ್ನು ಪಡೆಯುವುದನ್ನು ಸಾಧ್ಯವಾಗಿಸಲಿದೆ ಎಂದು ಹೇಳಿದ ಪ್ರಧಾನಿ, ಇಂದು ಭಾರತೀಯರು ಮುಂದಿನ ಒಂದು ಸಾವಿರ ವರ್ಷಗಳ ಕಾಲ ನೆನಪಿಡಬಹುದಾದ ಪ್ರಗತಿಗೆ ಬುನಾದಿಯನ್ನು ಹಾಕಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ.
ಒಮ್ಮೆ ಕೇವಲ ಬೃಹತ್ ಮಾರುಕಟ್ಟೆಯಾಗಿ ನೋಡಲಾಗಿದ್ದ ಭಾರತವು ಈಗ ಜಾಗತಿಕ ಸವಾಲುಗಳಿಗೆ ಪರಿಹಾರಗಳ ಭಾಗವಾಗಿದೆ ಎಂದರು. ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯು ಬಣ್ಣಿಸಿರುವ ‘ಉಚಿತ ಸಂಸ್ಕೃತಿʼಯ ವಿರುದ್ಧ ತನ್ನ ದಾಳಿಯನ್ನು ಇಮ್ಮಡಿಗೊಳಿಸಿದರು.
ಬೇಜವಾಬ್ದಾರಿಯುತ ಹಣಕಾಸು ನೀತಿಗಳು ಮತ್ತು ಆಮಿಷಗಳನ್ನೊಡ್ಡಿ ಗಳಿಸುವ ಜನಪ್ರಿಯತೆ ಅಲ್ಪಾವಧಿಯ ರಾಜಕೀಯ ಫಲಿತಾಂಶಗಳನ್ನು ನೀಡಬಹುದು, ಆದರೆ ಅದಕ್ಕಾಗಿ ದೀರ್ಘಾವಧಿಯಲ್ಲಿ ದುಬಾರಿ ಸಾಮಾಜಿಕ ಮತ್ತು ಆರ್ಥಿಕ ಬೆಲೆಯನ್ನು ತೆರಬೇಕಾಗುತ್ತದೆ ಎಂದರು.







