ಕರ್ನಾಟಕದಲ್ಲಿ ‘ಭೂಹಗರಣ’ ಆರೋಪ : ಕೇರಳದ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ವಿರುದ್ಧ ಕ್ರಮಕ್ಕೆ ಸಿಪಿಎಂ, ಕಾಂಗ್ರೆಸ್ ಆಗ್ರಹ

ತಿರುವನಂತಪುರ, ಅ. 28: ರಾಜ್ಯ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಕರ್ನಾಟಕದಲ್ಲಿ ಭೂಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೇರಳದ ಆಡಳಿತಾರೂಢ ಸಿಪಿಐ (ಎಂ) ಮಂಗಳವಾರ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ರಾಜೀವ್ ಚಂದ್ರಶೇಖರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅದು ಆಗ್ರಹಿಸಿದೆ.
ರಾಜೀವ್ ಚಂದ್ರಶೇಖರ್ ಈ ಆರೋಪವನ್ನು ನಿರಾಕರಿಸಿದ್ದಾರೆ. ಈ ಆರೋಪ ‘‘ಆಧಾರ ರಹಿತ’’ ‘‘ಸುಳ್ಳು’’ ಎಂದು ಹೇಳಿದ್ದಾರೆ. ಆದರೆ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಚಂದ್ರಶೇಖರ್ ಅವರು ರಾಜೀವ್ ಚಂದ್ರಶೇಖರ್ ವಿರುದ್ಧ ಸಿಟ್ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ರಾಜೀವ್ ಚಂದ್ರಶೇಖರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಅಲ್ಲದೆ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ.
ಕಾಂಗ್ರೆಸ್ ಪಾಲೆಕ್ಕಾಡ್‌ನಲ್ಲಿ ಬಿಜೆಪಿ ಆಡಳಿತದ ನಗರ ಸಭೆಯ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದೆ. ಅದು ಚಂದ್ರಶೇಖರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದೆ ಹಾಗೂ ಅವರ ಪ್ರತಿಕೃತಿ ದಹಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಭಟನಕಾರರು ರಾಜೀವ್ ಚಂದ್ರಶೇಖರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು. ಅಲ್ಲದೆ ಭೂ ಹಗರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು.





