ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ನ್ನು ವರಿಸಲಿರುವ ಟೀಂ ಇಂಡಿಯಾ ಆಟಗಾರ ರಿಂಕು ಸಿಂಗ್

Photo | PTI
ಹೊಸದಿಲ್ಲಿ : ಟೀಂ ಇಂಡಿಯಾ ಆಟಗಾರ ರಿಂಕು ಸಿಂಗ್ ಹಸೆಮಣೆ ಏರಲು ಸಜ್ಜಾಗಿದ್ದು, ಸಮಾಜವಾದಿ ಪಕ್ಷದ(ಎಸ್ ಪಿ) ಸಂಸದೆ ಪ್ರಿಯಾ ಸರೋಜ್ ಅವರನ್ನು ವಿವಾಹವಾಗಲಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಪ್ರಿಯಾ ಸರೋಜ್ ಅವರ ತಂದೆ, ಎಸ್ ಪಿ ಶಾಸಕ ತುಫಾನಿ ಸರೋಜ್ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದು, ಮಗಳು ಪ್ರಿಯಾ ಅವರು ಸ್ನೇಹಿತರೊಬ್ಬರ ಮೂಲಕ ರಿಂಕು ಸಿಂಗ್ ಅವರನ್ನು ಭೇಟಿಯಾಗಿದ್ದಾರೆ, ರಿಂಕು ಮತ್ತು ಪ್ರಿಯಾ ಒಂದು ವರ್ಷಕ್ಕೂ ಹೆಚ್ಚು ಕಾಲ ಒಬ್ಬರಿಗೊಬ್ಬರು ಪರಿಚಿತರು. ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ವಿವಾಹದ ಬಗ್ಗೆ ಎರಡೂ ಕುಟುಂಬಗಳು ಮಾತುಕತೆಯನ್ನು ಪೂರ್ಣಗೊಳಿಸಿದೆ. ರಿಂಕು ಸಿಂಗ್ ಅವರ ಪಾಲಕರನ್ನು ಜ.16ರಂದು ಅಲಿಘಡದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಎರಡೂ ಕುಟುಂಬಗಳು ಈ ಮದುವೆಗೆ ಒಪ್ಪಿಕೊಂಡಿವೆ. ಆದರೆ ನಿಶ್ಚಿತಾರ್ಥ ಮತ್ತು ಮದುವೆ ಕಾರ್ಯಕ್ರಮಗಳ ಬಗ್ಗೆ ದಿನ ನಿಗದಿ ಪಡಿಸಲಾಗಿಲ್ಲʼ ಎಂದು ಹೇಳಿದ್ದಾರೆ.
ಪ್ರಿಯಾ ಸರೋಜ್ ಅವರು ವಾರಾಣಸಿಯ ಕಾರ್ಖಿಯೊ ಗ್ರಾಮದ ನಿವಾಸಿಯಾಗಿದ್ದು, ನೋಯ್ಡಾದ ಅಮಿಟಿ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಮತ್ತು ದಿಲ್ಲಿ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಸುಪ್ರೀಂ ಕೋರ್ಟ್ ಮಾಜಿ ವಕೀಲೆಯಾಗಿರುವ ಪ್ರಿಯಾ ಸರೋಜ್ 2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತನ್ನ ತಂದೆಯ ಪರವಾಗಿ ಪ್ರಚಾರ ಮಾಡುವ ಮೂಲಕ ಮೊದಲ ಬಾರಿಗೆ ರಾಜಕೀಯಕ್ಕೆ ಧುಮುಕಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಚ್ಲಿಶಹರ್ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಲಕ್ನೋದಲ್ಲಿ ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಅವರ ನಿಶ್ಚಿತಾರ್ಥ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ. ರಿಂಕು ಸಿಂಗ್ ಅವರು ಮುಂಬರುವ IPLನಲ್ಲಿ ಆಡಲಿದ್ದು, ವಿವಾಹ ಕಾರ್ಯಕ್ರಮ ಅವರ ಆಟದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿದೆ.