ವಡೋದರದಲ್ಲಿ ಸರಕಾರಿ ಜಮೀನು ಅತಿಕ್ರಮಣ ಆರೋಪ : ಗುಜರಾತ್ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ದ ಅರ್ಜಿ ಹಿಂಪಡೆದ ಯೂಸುಫ್ ಪಠಾಣ್

ಯೂಸುಫ್ ಪಠಾಣ್ (Photo:X@iamyusufpathan)
ಗಾಂಧಿನಗರ: ವಡೋದರಾದಲ್ಲಿ ಸರಕಾರಿ ಜಮೀನು ಅತಿಕ್ರಮಣ ಆರೋಪಕ್ಕೆ ಸಂಬಂಧಿಸಿದಂತೆ, ಹೈಕೋರ್ಟ್ನ ಏಕಸದಸ್ಯ ಪೀಠವು ಆಗಸ್ಟ್ 2025ರಲ್ಲಿ ಯೂಸುಫ್ ಪಠಾಣ್ ಅವರನ್ನು ಸರಕಾರಿ ಜಮೀನಿನ ಅತಿಕ್ರಮಣದಾರ ಎಂದು ಪರಿಗಣಿಸಿತ್ತು. ಈ ಆದೇಶದ ವಿರುದ್ಧ ಕ್ರಿಕೆಟಿಗ ಯೂಸುಫ್ ಪಠಾಣ್ ಸಲ್ಲಿಸಿದ್ದ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್ನಿಂದ ಹಿಂಪಡೆದಿದ್ದಾರೆ.
ಪಠಾಣ್ ಪರ ಹಾಜರಾದ ಹಿರಿಯ ವಕೀಲ ಶಾಲಿನ್ ಮೆಹ್ತಾ, ಅರ್ಜಿದಾರ ಪಠಾಣ್ ರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಡಿ.ಎನ್. ರೇ ಅವರಿದ್ದ ವಿಭಾಗೀಯ ಪೀಠದ ಮುಂದೆ ಸಲ್ಲಿಸಿದರು.
ಇದಕ್ಕೂ ಮುಂಚೆ, ಇತರ ಕ್ರಿಕೆಟಿಗರಿಗೂ ಜಮೀನು ಹಂಚಿಕೆ ಮಾಡಿರುವ ರಾಜ್ಯ ಸರಕಾರದ ನೀತಿಯಡಿ ತಾವು ಈ ಪ್ರಕರಣವನ್ನು ಮುಂದುವರಿಸುತ್ತಿರುವುದಾಗಿ ಪಠಾಣ್ ಹೈಕೋರ್ಟ್ಗೆ ತಿಳಿಸಿದ್ದರು. ಪ್ರಕರಣವನ್ನು ಮುಂದುವರಿಸಲು ಅವರು ಹೆಚ್ಚುವರಿ ಕಾಲಾವಕಾಶವನ್ನೂ ಕೋರಿದ್ದರು.
ಈ ಕುರಿತು ಪೀಠದ ಮುಂದೆ ವಾದ ಮಂಡಿಸಿದ ವಕೀಲರು, "ನಾವು ಮಹಾನಗರ ಪಾಲಿಕೆಯ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದ ಕಾರಣ ಪದೇ ಪದೇ ಸಮಯ ಕೋರಿದ್ದೆವು. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ನಿವೇಶನ ನೀಡಲು ಅವಕಾಶ ನೀಡುವ ಸುತ್ತೋಲೆಯೊಂದಿದೆ ಎಂದು ನಾವು ಹೇಳುತ್ತಿದ್ದೇವೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ನಾನು ಈ ಅರ್ಜಿಯನ್ನು ಹಿಂಪಡೆಯುತ್ತೇನೆ. ಈ ಕುರಿತು ನನ್ನ ಕಕ್ಷಿದಾರರಿಂದ ಸೂಚನೆಗಳನ್ನು ಪಡೆದಿದ್ದೇನೆ" ಎಂದು ಹೇಳಿದರು.
ಮುಂದುವರಿದು, "ಇದು ಆಗುವುದಾದರೆ ನ್ಯಾಯಾಲಯದ ಹೊರಗೆ ನಡೆಯುತ್ತದೆ, ಇಲ್ಲದಿದ್ದರೆ ಆಗುವುದಿಲ್ಲ. ನಾವು ಅವರನ್ನು ಮನವೊಲಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿದ್ದೆ, ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದಕ್ಕಾಗಿ ನಾನು ವಿಷಾದಿಸುತ್ತೇನೆ" ಎಂದು ತಿಳಿಸಿದರು.
ಇದಕ್ಕೆ ಅನುಮತಿ ನೀಡಿದ ನ್ಯಾಯಾಲಯವು, "ಮೇಲ್ಮನವಿಯನ್ನು ಹಿಂಪಡೆಯಲು ಕಕ್ಷಿದಾರರು ಸೂಚಿಸಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಪರಿಗಣಿಸಿ ವಜಾಗೊಳಿಸಲಾಗಿದೆ" ಎಂದು ಆದೇಶಿಸಿತು.
ಯಾವುದೇ ಸಾರ್ವಜನಿಕ ಹರಾಜು ನಡೆಸದೆ ಪಠಾಣ್ ಅವರಿಗೆ 978 ಚದರ ಮೀಟರ್ ವಿಸ್ತೀರ್ಣದ ನಿವೇಶನವನ್ನು 99 ವರ್ಷಗಳ ಗುತ್ತಿಗೆಗೆ ನೀಡಲು ವಡೋದರಾ ಮಹಾನಗರ ಪಾಲಿಕೆಯು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ರಾಜ್ಯ ಸರಕಾರವು ಜೂನ್ 6, 2024ರ ಆದೇಶದ ಮೂಲಕ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಯೂಸುಫ್ ಪಠಾಣ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಏಕಸದಸ್ಯ ಪೀಠವು ರಾಜ್ಯ ಸರಕಾರದ ಆದೇಶವನ್ನು ಎತ್ತಿಹಿಡಿದು, ವಿವಾದಿತ ನಿವೇಶನದಿಂದ ಅತಿಕ್ರಮಣವನ್ನು ತುರ್ತಾಗಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿಎಂಸಿಗೆ ನಿರ್ದೇಶಿಸಿತ್ತು.






