ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಮಹಾರಾಷ್ಟ್ರ ಎನ್ಡಿಎಯಲ್ಲಿ ಬಿಕ್ಕಟ್ಟು

PC: PTI
ಮುಂಬೈ: "ಶಿಂಧೆ ಮತ್ತೆ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ" ಎಂದು ಶಿವಸೇನೆ ಮುಖಂಡರು ಬಹಿರಂಗ ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರದ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಘಟಕ ಪಕ್ಷಗಳ ನಡುವಿನ ಸಂಘರ್ಷ ತೀವ್ರಗೊಂಡಿದೆ.
2024ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನಗಳನ್ನು ಗೆದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದ ಶಿಂಧೆ, ತಮ್ಮನ್ನು ಮತ್ತೆ ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. 2022ರಿಂದ 2024ರವರೆಗೆ ಉಪಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ಗೆ ಸಿಎಂ ಹುದ್ದೆ ಬಿಟ್ಟುಕೊಡಬೇಕಾಯಿತು.
ಶಿಂಧೆ ಮತ್ತೆ ರಾಜ್ಯದ ಸಿಎಂ ಆಗಲಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ಶಿಕ್ಷಣ ಸಚಿವ ದಾದಾ ಭೂಸೆ ವಿವಾದದ ಕಿಡಿ ಹೊತ್ತಿಸಿದ್ದರು. "ಮಹಾರಾಷ್ಟ್ರ ಇಂಥ ಮುಖ್ಯಮಂತ್ರಿಯನ್ನು ಕಂಡಿಲ್ಲ; ಭವಿಷ್ಯದಲ್ಲಿ ಕಾಣುವುದೂ ಇಲ್ಲ ಎಂದು ಈ ಮೊದಲು ನೀವು ಹೇಳಿಕೆ ನೀಡಿದ್ದೀರಿ. ಆದರೆ ಇಂದು ಕೂಡ ನಿಮ್ಮ ಹೃದಯಲ್ಲಿರುವ ಸಿಎಂ ಯಾರು ಎಂದು ಜನರನ್ನು ಕೇಳಿದರೆ ಶಿಂಧೆ ಸಾಹೇಬರು ಎಂಬ ಉತ್ತರ ಬರುತ್ತದೆ" ಎಂದು ಭೂಸೆ ಹೇಳಿದ್ದರು.
ಏತನ್ಮಧ್ಯೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರ ಬಿರುಸುಗೊಳ್ಳುತ್ತಿದ್ದು, ಶಿಂಧೆ ಬಣದ ಶಾಸಕ ನೀಲೇಶ್ ರಾಣೆ ಬುಧವಾರ ರಾತ್ರಿ ಹೇಳಿಕೆ ನೀಡಿ, ಬಿಜೆಪಿ ಕಾರ್ಯಕರ್ತ ವಿಜಯ್ ಕೇನವಾಡೇಕರ್ ನಿವಾಸದಿಂದ 25 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆ ನೀಡಿದ್ದರು. ಮತದಾರರಿಗೆ ಹಂಚುವ ಸಲುವಾಗಿ ದೊಡ್ಡ ಮೊತ್ತವನ್ನು ಬಿಜೆಪಿ ಕೂಡಿಟ್ಟಿದ್ದು, ಚುನಾವಣೆಯ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಆರೋಪಿಸಿದ್ದರು.
ಇದು ರಾಜಕೀಯ ದುರುದ್ದೇಶದ ಆರೋಪ ಎಂದು ಬಿಜೆಪಿ ಮುಖಂಡರು ವಾಗ್ದಾಳಿ ನಡೆದಿದ್ದಾರೆ. ವಶಪಡಿಸಿಕೊಂಡ ಹಣ ಖಾಸಗಿ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದ್ದು, ಇದು ಅಪರಾಧವಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.







