100 ಡಾಲರ್ ದಾಟಿದ ಕಚ್ಚಾ ತೈಲ ಬೆಲೆ: ಭಾರತಕ್ಕೆ ತಟ್ಟಿದ ಬಿಸಿ

ಸಾಂದರ್ಭಿಕ ಚಿತ್ರ Photo Credit : AP
ಹೊಸದಿಲ್ಲಿ: ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಬಿಸಿ ಕೇವಲ ಮಧ್ಯಪ್ರಾಚ್ಯಕ್ಕೆ ಮಾತ್ರ ಸೀಮಿತವಾಗದೇ ಜನಸಾಮಾನ್ಯರ ಮಾಸಿಕ ಬಜೆಟ್ ಹಾಗೂ ವಿದೇಶಗಳಲ್ಲಿ ಅಧ್ಯಯನ ಮಾಡುವ ಕನಸು ಸೇರಿದಂತೆ ಇದೀಗ ದೇಶದ ಪ್ರತಿಯೊಂದು ಕುಟುಂಬಗಳಿಗೂ ತಟ್ಟುತ್ತಿದೆ.
ಫೆಬ್ರವರಿ 28ರಂದು ಆರಂಭವಾದ ಸಂಘರ್ಷ ಹಲವು ವಾರಗಳ ಕಾಲ ಮುಂದುವರಿದ ಪರಿಣಾಮವಾಗಿ ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ನಿರ್ಬಂಧವಿದ್ದು, ಜಾಗತಿಕ ಮಟ್ಟದಲ್ಲಿ ಸರಕು ಸಾಗಾಣಿಕೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಮುಖ್ಯವಾಗಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್ ಗೆ 100 ಡಾಲರ್ ದಾಟಿದ್ದು, ಯುದ್ಧಾರಂಭಕ್ಕೆ ಮುನ್ನ ಇದು ಪ್ರತಿ ಬ್ಯಾರಲ್ ಗೆ 70 ಡಾಲರ್ ಆಗಿತ್ತು. ಬ್ರೆಂಟ್ ಕ್ರೂಡ್ ಬೆಲೆ ಬ್ಯಾರಲ್ ಗೆ 111 ಡಾಲರ್ ಆಗಿದ್ದು, ಇದರ ಸರಣಿ ಪರಿಣಾಮಗಳು ತೈಲಬೆಲೆ ಮಾತ್ರವಲ್ಲದೇ ಮಾರುಕಟ್ಟೆಗಳು, ಕರೆನ್ಸಿಗಳು ಮತ್ತು ವಹಿವಾಟುಗಳ ಮೇಲೂ ಕಂಡುಬರುತ್ತಿವೆ.
ಯುದ್ಧವಲಯದಲ್ಲಿ ಇಲ್ಲದಿದ್ದರೂ ಯುದ್ಧದ ಬಿಸಿ ಭಾರತೀಯ ಕುಟುಂಬಗಳಿಗೂ ತಟ್ಟಿದ್ದು, ಈಗ ಮನೆ ಖರ್ಚು, ಆರ್ಥಿಕ ವ್ಯವಸ್ಥೆ ಮತ್ತು ದೈನಂದಿನ ವೆಚ್ಚಗಳ ಮೇಲೂ ಕಾಣಿಸುತ್ತಿದೆ. ಜತೆಗೆ ಅಪಾಯದಲ್ಲಿರುವ ಹೂಡಿಕೆ ಶ್ರೇಣಿಗಳ ಮೇಲೆ ಹೂಡಿಕೆದಾರರು ನಿಗಾ ಇರಿಸಿದ್ದಾರೆ. ದೇಶದಲ್ಲಿ ಕಳೆದ ಶುಕ್ರವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 3 ರೂಪಾಯಿ ಏರಿಕೆಯಾಗಿತ್ತು.
ಬೆಲೆ ಏರಿಕೆಯ ಹೊರತಾಗಿಯೂ ತೈಲ ಕಂಪನಿಗಳ ಮೇಲಿನ ಒತ್ತಡ ಕಡಿಮೆಯಾಗಿಲ್ಲ. ಎಸ್ಬಿಐ ಅಂದಾಜಿನ ಪ್ರಕಾರ ಬೆಲೆ ಏರಿಕೆಯಿಂದ ತೈಲ ಮಾರಾಟ ಕಂಪನಿಗಳಿಗೆ 52,700 ಕೋಟಿ ರೂಪಾಯಿ ಪರಿಹಾರ ದೊರಕಿದಂತಾಗಿದೆ. ಆದರೆ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಸಿಲಿಂಡರ್ ಗಳ ಮಾರಾಟವನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆಗೆ ಮಾರಾಟ ಮಾಡುತ್ತಿರುವುದರಿಂದ ಇದುವರೆಗೆ ದಿನಕ್ಕೆ 1000 ಕೋಟಿ ರೂಪಾಯಿ ಆಗುತ್ತಿದ್ದ ನಷ್ಟದ ಪ್ರಮಾಣ ದಿನಕ್ಕೆ 750 ಕೋಟಿಗೆ ಮಾತ್ರ ಇಳಿದಿದೆ.
ಷೇರು ಮಾರುಕಟ್ಟೆಯಲ್ಲೂ ಗಲ್ಫ್ ಯುದ್ಧ ತಲ್ಲಣ ಮೂಡಿಸಿದ್ದು, ಫೆಬ್ರವರಿ 28ರಿಂದೀಚೆಗೆ ಒಟ್ಟು 5.85 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಯುದ್ಧಕ್ಕೆ ಮುನ್ನ 81,287.19 ಇದ್ದ ಬಿಎಸ್ಇ ಸೆನ್ಸೆಕ್ಸ್ ಆರು ಸಾವಿರದಷ್ಟು ಕುಸಿದಿದೆ.
ಇತ್ತ ರೂಪಾಯಿ ಮೌಲ್ಯ ಕೂಡಾ 2025ರಲ್ಲಿ ಶೇಕಡ 5ರಷ್ಟು ಕುಸಿದಿದ್ದು, ಸೋಮವಾರ ಸಾರ್ವಕಾಲಿಕ ಕನಿಷ್ಠ ಮೌಲ್ಯ ದಾಖಲಾಗಿದೆ. ಇದೀಗ ಪ್ರತಿ ಡಾಲರ್ ಮೌಲ್ಯ 96.25 ರೂಪಾಯಿಯಷ್ಟಾಗಿದೆ. ಅಂದರೆ ಈ ವರ್ಷ ಶೇಕಡ 5.5ರಷ್ಟು ಕುಸಿದಂತಾಗಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರಾಟ ಮುಂದುವರಿಸಿದ್ದು, ಈ ತಿಂಗಳು ಬಂಡವಾಳದ ಹೊರಹರಿವು 27,048 ಕೋಟಿ ರೂಪಾಯಿ ತಲುಪಿದೆ. 2026ರಲ್ಲಿ ಇದುವರೆಗೆ ವಿದೇಶಿ ಹೂಡಿಕೆದಾರರು 2.2 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ವಾಪಾಸು ಪಡೆದುಕೊಂಡಿದ್ದಾರೆ. ಇದು 2025ರಲ್ಲಿ ವಿದೇಶಿ ಹೂಡಿಕೆದಾರರು ಹಿಂಪಡೆದ 1.66 ಲಕ್ಷ ಕೋಟಿಗಿಂತಲೂ ಅಧಿಕ.






