"ಕ್ರೂರ ತಮಾಷೆ" : ಮೋಡ ಬಿತ್ತನೆ ಕುರಿತು ದಿಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ಜೈರಾಮ್ ರಮೇಶ್ | Photo Credit : PTI
ಹೊಸ ದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ವಾಯು ಗುಣಮಟ್ಟ ಸುಧಾರಿಸಲು ಮೋಡ ಬಿತ್ತನೆ ಪ್ರಯೋಗ ನಡೆಸಿರುವ ದಿಲ್ಲಿ ಸರಕಾರವನ್ನು ರವಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, “ಸೀಮಿತ ಪ್ರದೇಶದಲ್ಲಿ ಒಂದೆರಡು ದಿನಗಳ ಕಾಲ ಆಗಿರುವ ಕೊಂಚ ಮಟ್ಟಿನ ಸುಧಾರಣೆಯನ್ನೇ ಸಾಧನೆ ಎಂದು ಹೇಳಿಕೊಳ್ಳುವುದು ಕ್ರೂರ ತಮಾಷೆ” ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ದಿಲ್ಲಿಯಲ್ಲಿನ ವಾಯು ಗುಣಮಟ್ಟ ಸುಧಾರಿಸುವ ಪ್ರಯೋಗದ ಭಾಗವಾಗಿ ಚಳಿಗಾಲದ ಮೋಡ ಬಿತ್ತನೆ ನಡೆಸಲು ದಿಲ್ಲಿ ಸರಕಾರ 34 ಕೋಟಿ ರೂ. ವ್ಯಯಿಸಿದೆ” ಎಂದು ಆರೋಪಿಸಿದ್ದಾರೆ.
ದಿಲ್ಲಿಯಲ್ಲಿನ ವಾಯು ಗುಣಮಟ್ಟ ಸುಧಾರಿಸಲು ಚಳಿಗಾಲದ ಮೋಡ ಬಿತ್ತನೆ ಸಲಹೆಯನ್ನು ಮೂರು ತಜ್ಞ ಸಂಸ್ಥೆಗಳಾದ ಎನ್ಸಿಟಿಯಲ್ಲಿನ ವಾಯು ಗುಣಮಟ್ಟ ನಿರ್ವಹಣೆ ಆಯೋಗ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಭಾರತೀಯ ಹವಾಮಾನ ಇಲಾಖೆ ಸ್ಪಷ್ಟವಾಗಿ ವಿರೋಧಿಸಿದ್ದವು ಎಂದು ಪ್ರಶ್ನೆಯೊಂದಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವರು ಡಿಸೆಂಬರ್ 5, 2024ರಂದು ರಾಜ್ಯಸಭೆಗೆ ಉತ್ತರಿಸಿದ್ದರು ಎಂದು ಜೈರಾಮ್ ರಮೇಶ್ ಗಮನ ಸೆಳೆದಿದ್ದಾರೆ.
ಚಳಿಗಾಲದ ಮೋಡ ಬಿತ್ತನೆ ಪ್ರಯೋಗದಿಂದ ದಿಲ್ಲಿಯ ವಾಯು ಗುಣಮಟ್ಟದಲ್ಲಿ ಯಾವುದೇ ಗಮನಾರ್ಹ ಸುಧಾರಣೆಯಾಗಿಲ್ಲ ಎಂದು ಅಕ್ಟೋಬರ್ 31, 2025ರಂದು ದೇಶದ ಪ್ರತಿಷ್ಠಿತ ದಿಲ್ಲಿ ಐಐಟಿಯ ಪ್ರಖ್ಯಾತ ವಾತಾವರಣ ವಿಜ್ಞಾನಗಳ ಕೇಂದ್ರವು ವಿಸ್ತೃತ ವರದಿಯನ್ನು ಬಿಡುಗಡೆ ಮಾಡಿದೆ. ಇದರಿಂದ ದಿಲ್ಲಿಯ ಹದಗೆಟ್ಟ ವಾಯು ಗುಣಮಟ್ಟ ಸುಧಾರಣೆಗೆ ಚಳಿಗಾಲದ ಮೋಡ ಬಿತ್ತನೆ ಯಾವುದೇ ರೀತಿಯಲ್ಲೂ ನೆರವು ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.







