‘ಚೀತಾಗಳ ಸಾವಿಗೆ ನಿರ್ಲಕ್ಷ್ಯ ಕಾರಣ’: ಮರಣೋತ್ತರ ವರದಿಯನ್ನು ಹಂಚಿಕೊಂಡ ಸಾಕೇತ್ ಗೋಖಲೆ

ಹೊಸದಿಲ್ಲಿ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ವಿದೇಶಗಳಿಂದ ತಂದ ಎಂಟು ಚೀತಾಗಳು ಮೃತಪಟ್ಟಿರುವ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಆರ್‌ಟಿಐ ಕಾರ್ಯಕರ್ತ ಹಾಗೂ ಟಿಎಂಸಿ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ ಅವರು ಮೃತ ಚೀತಾದ ಮರಣೋತ್ತರ ವರದಿಯನ್ನು ಹಂಚಿಕೊಂಡು ಚೀತಾ ನಿರ್ವಹಣೆಯಲ್ಲಿ ಗಂಭೀರ ಲೋಪವಾಗಿದೆ ಎಂದು ಆರೋಪಿಸಿದ್ದಾರೆ.
“ಕಳೆದ ವಾರ, ತೇಜಸ್ ಮತ್ತು ಸೂರಜ್ ಎಂಬ ಹೆಸರಿನ 2 ಚಿರತೆಗಳು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕೇವಲ 2 ದಿನಗಳ ಅವಧಿಯಲ್ಲಿ ಸಾವನ್ನಪ್ಪಿದ್ದವು. ಕಳೆದ 5 ತಿಂಗಳಲ್ಲಿ ಒಟ್ಟು 8 ಚೀತಾಗಳು ಸಾವನ್ನಪ್ಪಿವೆ. ಮೋದಿ ಸರ್ಕಾರವು ಅವುಗಳ ಸಾವಿಗೆ ಕಾದಾಟವನ್ನು ದೂಷಿಸಿತ್ತು. ಆದರೆ ಚೀತಾಗಳ ಕುತ್ತಿಗೆಗೆ ಹಾಕಿರುವ ರೇಡಿಯೋ ಕಾಲರ್‌ಗಳು ಅವುಗಳಿಗೆ ಹೊಂದಿಕೆಯಾಗುವುದಿಲ್ಲ, ಹಾಗೂ ಅದರಿಂದ ಅವುಗಳ ಕುತ್ತಿಗೆ ಮೇಲೆ ಗಾಯಗಳಾಗಿವೆ, ರೇಡಿಯೋ ಕಾಲರ್‌ಗಳು ಕುತ್ತಿಗೆ ಚರ್ಮದ ಮೇಲೆ ಉಜ್ಜಿ ಗಾಯವಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿದೆ ಎಂದು ವರದಿಗಳು ಈಗ ಬಹಿರಂಗಪಡಿಸಿವೆ” ಎಂದು ಸಾಕೇತ್ ಗೋಖಲೆ ಟ್ವೀಟ್ ಮಾಡಿದ್ದಾರೆ.
ಮುಂದುವರೆದು, “ತೇವಾಂಶದ ಕಾರಣದಿಂದಾಗಿ ಈ ಗಾಯಗಳಲ್ಲಿ ಸೋಂಕುಂಟಾಗಿ ಹುಳುಗಳಾಗಿವೆ. ಇದು "ಸೆಪ್ಟಿಸೆಮಿಯಾ" ಅಥವಾ "ಹಠಾತ್ ಆಘಾತ" ಕ್ಕೆ ಕಾರಣವಾಗಿದ್ದು, ಇದರಿಂದ ಚಿರತೆಗಳು ಸಾವನ್ನಪ್ಪಿವೆ” ಎಂದು ಗೋಖಲೆ ತಿಳಿಸಿದ್ದಾರೆ.
“ಚೀತಾಗಳ ಸ್ಥಳಾಂತರ ಯೋಜನೆಯನ್ನು ಮೋದಿ ಸರ್ಕಾರವು ಸಂಪೂರ್ಣವಾಗಿ ಫೋಟೋಶೂಟ್ ಎಂದಷ್ಟೇ ಪರಿಗಣಿಸಿದೆ, ಬಳಿಕ ಅವುಗಳನ್ನು ನಿರ್ಲಕ್ಷಿಸಲಾಗಿದೆ. ಚೀತಾಗಳ ಸಾವುಗಳನ್ನು ತಡೆಗಟ್ಟಲು ಸಾಧ್ಯವಿರುವಾಗ ಅವುಗಳನ್ನು ಸಾಯಲು ಬಿಟ್ಟಿರುವುದು ಸ್ವೀಕಾರಾರ್ಹವಲ್ಲ, ಈ ಬಗ್ಗೆ ಸಚಿವರಿಗೆ ಪತ್ರ ಬರೆದಿದ್ದೇನೆ. ಸಚಿವ ಬೂಪೇಂದ್ರ ಯಾದವ್ ಅವರು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಚೀತಾಗಳ ಜೀವವನ್ನು ರಕ್ಷಿಸುವ ಬಗ್ಗೆ ಅವರ ಸಚಿವಾಲಯ ಮತ್ತು ಸರ್ಕಾರದ ಸಡಿಲವಾದ ಧೋರಣೆಯನ್ನು ಬದಲಾಯಿಸುವಂತೆ ಒತ್ತಾಯಿಸಿದ್ದೇನೆ” ಎಂದು ಸಾಕೇತ್ ಗೋಖಲೆ ತಿಳಿಸಿದ್ದಾರೆ.







