ಕ್ರಿಪ್ಟೋ ಕರೆನ್ಸಿ ಪರಿವರ್ತನೆ ಪ್ರಕರಣ | ಹಲವು ಸ್ಥಳಗಳಲ್ಲಿ ಈಡಿ ದಾಳಿ

Photo: Facebook/ED
ಹೊಸದಿಲ್ಲಿ: 600 ಕೋಟಿ ರೂ. ಕ್ರಿಪ್ಟೋ ಕರೆನ್ಸಿ ಪರಿವರ್ತನೆ ಪ್ರಕರಣಕ್ಕೆ ಸಂಬಂಧಿಸಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್ಇಎಂಎ) ಅಡಿಯಲ್ಲಿ ದಿಲ್ಲಿ, ಮುಂಬೈ ಹಾಗೂ ಜೈಪುರ ಸೇರಿದಂತೆ ಹಲವು ನಗರಗಳಲ್ಲಿ ಜಾರಿ ನಿರ್ದೇಶನಾಲಯ (ಈಡಿ) ದಾಳಿ ನಡೆಸಿದೆ.
ಇದುವರೆಗೆ ಆರೋಪಿಗಳಿಗೆ ಸೇರಿದ 2.18 ಕೋಟಿ ರೂ. ಇರುವ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಲಾಗಿದೆ.
ಅಮೆರಿಕದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಭಾರತದ ಪ್ರಜೆ ಚಿರಾಗ್ ತೋಮರ್ ನೂರಾರು ಜನರಿಂದ 20 ದಶಲಕ್ಷ ಡಾಲರ್ ಕಳವುಗೈದಿದ್ದಾನೆ ಎಂದು ದಿನಪತ್ರಿಕೆಯೊಂದರ ವರದಿ ಬಹಿರಂಗಗೊಳಿಸಿದ ಬಳಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಆರಂಭಿಸಿದ್ದರು.
ಈತ ವಂಚನೆ ನಡೆಸಲು ಕ್ರಿಪ್ಟೋಕರೆನ್ಸಿ ವಿನಿಯಮ ಕಾಯಿನ್ಬೇಸ್ ಅನ್ನು ಹೋಲುವ ನಕಲಿ ವೆಬ್ಸೈಟ್ಗಳನ್ನು ಬಳಸಿದ್ದ. ಈತನಿಗೆ ಅಮೆರಿಕದ ನ್ಯಾಯಾಲಯ ಕಳೆದ ವರ್ಷ ಅಕ್ಟೋಬರ್ನಲ್ಲಿ 60 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು.
ಈತ ಸರ್ಚ್ ಎಂಜಿನ್ ಆಪ್ಟಿಮೈಸ್ ತಂತ್ರಗಳನ್ನು ಬಳಸಿ ವಿಶ್ವಾಸಾರ್ಹ ವೆಬ್ಸೈಟ್ಗಳನ್ನು ನಕಲಿ ಮಾಡುತ್ತಿದ್ದ. ಇದು ನಕಲಿ ವೆಬ್ಸೈಟ್ಗಳು ಶೋಧ ಫಲಿತಾಂಶದಲ್ಲಿ ಮೇಲ್ಗಡೆ ಹಾಗೂ ಅವುಗಳು ನ್ಯಾಯಯುತ ವೆಬ್ಸೈಟ್ಗಳಂತೆ ಕಾಣುವಂತೆ ಮಾಡಿದೆ ಎಂಬುದನ್ನು ತನಿಖೆಯ ವೇಳೆ ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿದೆ.
----------------------------------







