ಪ್ರಧಾನಿ ಮೋದಿ ಕುರಿತು ವರದಿಯ ಬೆನ್ನಲ್ಲೇ ಭಾರತದಿಂದ ಸೈಬರ್ ದಾಳಿ; ದಕ್ಷಿಣ ಆಫ್ರಿಕಾದ ಸುದ್ದಿ ಜಾಲತಾಣದ ಆರೋಪ

Photo : TWITTER / NARENDRA MODI
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ಸರಕಾರವು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ‘ಕೇವಲ ಸಂಪುಟ ಸಚಿವರನ್ನು ರವಾನಿಸಿದ್ದರಿಂದ’ ಅವರು ವಿಮಾನದಿಂದ ಇಳಿಯಲು ನಿರಾಕರಿಸಿದ್ದರು ಎಂಬ ವರದಿಯನ್ನು ತಾನು ಪ್ರಕಟಿಸಿದ ಬಳಿಕ ಭಾರತದಿಂದ ಸೈಬರ್ ದಾಳಿಗೆ ತಾನು ಗುರಿಯಾಗಿದ್ದೇನೆ ಎಂದು ಅಲ್ಲಿಯ ಡಿಜಿಟಲ್ ಸುದ್ದಿ ಜಾಲತಾಣ ‘ಡೇಲಿ ಮಾವೆರಿಕ್’ ಆರೋಪಿಸಿದೆ.
‘ನಾವು ಭಾರತದಿಂದ ಡಿಡಿಒಎಸ್ ದಾಳಿಗಳಿಗೆ ತುತ್ತಾಗಿದ್ದೇವೆ ಎನ್ನುವುದನ್ನು ನಾನು ಖಚಿತಪಡಿಸಬಲ್ಲೆ’ ಎಂದು ಡೇಲಿ ಮಾವೆರಿಕ್ನ ಸಿಇಒ ಸ್ಟೈಲಿ ಚರಲಂಬಸ್ ಅವರು ಬುಧವಾರ ಭಾರತೀಯ ಸುದ್ದಿಸಂಸ್ಥೆಗೆ ತಿಳಿಸಿದರು.
ಡಿಸ್ಟ್ರಿಬ್ಯೂಟೆಡ್ ಡಿನಾಯಲ್ ಆಫ್ ಸರ್ವಿಸ್ ಅಥವಾ ಡಿಡಿಒಎಸ್ ಹೆಚ್ಚಿನ ದಟ್ಟಣೆಯಿರುವ ಜಾಲತಾಣ ಅಥವಾ ಅದರ ಸರ್ವರ್ನ್ನು ನಿರ್ಬಂಧಿಸಲು ವಿನ್ಯಾಸಗೊಳಿಸಲಾದ ಸೈಬರ್ ದಾಳಿಯ ವಿಧವಾಗಿದೆ. ಪರಿಣಾಮವಾಗಿ ಆ ಜಾಲತಾಣ ಬಳಕೆದಾರರಿಗೆ ಲಭ್ಯವಾಗುವುದಿಲ್ಲ.
ಮೋದಿ ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರಿಟೋರಿಯಾದ ವಾಟರ್ಕ್ಲೂಫ್ ವಾಯುಪಡೆ ನಿಲ್ದಾಣದಲ್ಲಿ ವಿಮಾನದಿಂದ ಇಳಿಯಲು ಮೋದಿಯವರು ನಿರಾಕರಿಸಿದ ಬಳಿಕ ಅವರನ್ನು ಸ್ವಾಗತಿಸಲು ದ.ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಉಪಾಧ್ಯಕ್ಷ ಪಾಲ್ ಮಾರ್ಶಟೈಲ್ರನ್ನು ರವಾನಿಸಿದ್ದರು ಎಂದು ಡೇಲಿ ಮಾವೆರಿಕ್ ಮಂಗಳವಾರ ವರದಿ ಮಾಡಿತ್ತು.
ಇದಕ್ಕೆ ವಿರುದ್ಧವಾಗಿ ಸೋಮವಾರ ರಾತ್ರಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಆಗಮಿಸಿದಾಗ ಅವರನ್ನು ಬರಮಾಡಿಕೊಳ್ಳಲು ರಾಮಫೋಸಾ ಖುದ್ದಾಗಿ ವಿಮಾನ ನಿಲ್ದಾಣದ ಟರ್ಮ್ಯಾಕ್ನಲ್ಲಿ ಉಪಸ್ಥಿತರಿದ್ದರು ಎಂದೂ ಅದು ಹೇಳಿತ್ತು.
‘ಹಲವಾರು ಗಂಟೆಗಳ ಹಿಂದೆ ಜಾಲತಾಣವು ಏಕಾಏಕಿ ಸ್ಥಗಿತಗೊಂಡಿತ್ತು. ಶೀಘ್ರವೇ ಅದನ್ನು ಪುನರಾರಂಭಿಸಿದ ನಾವು ಬೃಹತ್ ಡಿಡಿಒಎಸ್ ದಾಳಿಯನ್ನು ಗುರುತಿಸಿದ್ದೆವು. ತನಿಖೆಯ ಬಳಿಕ ಈ ದಾಳಿಯು ಭಾರತೀಯ ಸರ್ವರ್ಗಳ ಮೂಲಕ ನಡೆದಿತ್ತು ಎನ್ನುವುದು ಬೆಳಕಿಗೆ ಬಂದಿದೆ’ ಎಂದು ಡೇಲಿ ಮಾವೆರಿಕ್ ಬುಧವಾರ ಸಂಜೆ ತನ್ನ ಭದ್ರತಾ ಸಂಯೋಜಕರನ್ನು ಉಲ್ಲೇಖಿಸಿ ಹೇಳಿಕೆಯಲ್ಲಿ ತಿಳಿಸಿದೆ.
‘ದಾಳಿಯ ಮೂಲವನ್ನು ಮರೆಮಾಚಲು ಯಾವುದೇ ಪ್ರಯತ್ನ ಮಾಡಿರಲಿಲ್ಲ,ಹೀಗಾಗಿ ಭಾರತೀಯರಿಗೆ ಈ ವರದಿಯ ಲಭ್ಯತೆಯನ್ನು ನಿರಾಕರಿಸುವುದು ದಾಳಿಯ ಉದ್ದೇಶವಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಜಾಲತಾಣದ ಸಮಗ್ರತೆಯನ್ನು ರಕ್ಷಿಸಲು ಭಾರತದ ಸಂಪೂರ್ಣ ಡೊಮೇನ್ನ್ನು ನಿರ್ಬಂಧಿಸುವುದನ್ನು ಹೊರತು ಪಡಿಸಿ ಬೇರೆ ಆಯ್ಕೆ ನಮಗಿರಲಿಲ್ಲ ’ ಎಂದು ಡೇಲಿ ಮಾವೆರಿಕ್ನ ಮುಖ್ಯ ಸಂಪಾದಕ ಬ್ರಾಂಕೋ ಬರ್ಕಿಕ್ ಹೇಳಿದರು.
ವರದಿಯಲ್ಲಿ ಬರೆದಿರುವುದನ್ನು ದ.ಆಫ್ರಿಕಾದ ಉಪಾಧ್ಯಕ್ಷರ ಕಚೇರಿಯು ಬುಧವಾರ ಸಂಜೆ ನಿರಾಕರಿಸಿದೆ. ಡೇಲಿ ಮಾವೆರಿಕ್ನ ವರದಿಯ ಪ್ರತಿಯೊಂದು ಅಂಶವೂ ಸುಳ್ಳು ಆಗಿದೆ ಎಂದು ಕಚೇರಿಯ ವಕ್ತಾರರು ಭಾರತೀಯ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದರು.
ಭಾರತದ ಪ್ರಧಾನಿಗಳು ಆಗಮಿಸಲಿದ್ದಾರೆ ಮತ್ತು ತಾನು ಅವರನ್ನು ಸ್ವಾಗತಿಸಲಿದ್ದೇನೆ ಎನ್ನುವುದು ಉಪಾಧ್ಯಕ್ಷರಿಗೆ ಮೊದಲೇ ಗೊತ್ತಿತ್ತು. ಪ್ರಧಾನಿಯವರು ಬಂದಿಳಿಯುವ ಮುನ್ನವೇ ಅವರು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು ಎಂದರು.
ತನ್ನ ವರದಿಗೆ ತಾನು ಬದ್ಧನಾಗಿದ್ದೇನೆ ಮತ್ತು ಬೆಳವಣಿಗೆಗಳ ಕುರಿತು ವರದಿ ಮಾಡುವುದನ್ನು ಮುಂದುವರಿಸುವುದಾಗಿ ಡೇಲಿ ಮಾವೆರಿಕ್ ಹೇಳಿಕೆಯಲ್ಲಿ ತಿಳಿಸಿದೆ.







