ಫಲಿತಾಂಶೋತ್ತರ ಸೇವೆಗಳ ಪೋರ್ಟಲ್ ಮೇಲೆ ಸೈಬರ್ ದಾಳಿ: ಸಿಬಿಎಸ್ಇಯಿಂದ ಪೊಲೀಸ್ ದೂರು ದಾಖಲು

ಸಾಂದರ್ಭಿಕ ಚಿತ್ರ | Photo Credit : magnific
ಹೊಸದಿಲ್ಲಿ: ಹನ್ನೆರಡನೇ ತರಗತಿ ವಿದ್ಯಾರ್ಥಿಗಳ ಮರು ಮೌಲ್ಯಮಾಪನ ಪ್ರಕ್ರಿಯೆಗೆ ತಾಂತ್ರಿಕ ದೋಷದಿಂದಾಗಿ ಒಂದು ವಾರದಿಂದ ಅಡ್ಡಿ ಉಂಟಾಗುತ್ತಿದ್ದ ಬೆನ್ನಲ್ಲೇ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ತನ್ನ ಫಲಿತಾಂಶೋತ್ತರ ಸೇವೆಗಳ ಪೋರ್ಟಲ್ ಮೇಲೆ ಸಂಘಟಿತ ಸೈಬರ್ ದಾಳಿ ನಡೆದಿರುವುದನ್ನು ಉಲ್ಲೇಖಿಸಿ ದಿಲ್ಲಿ ಪೊಲೀಸರಿಗೆ ಶುಕ್ರವಾರ ಅಧಿಕೃತ ದೂರು ನೀಡಿದೆ.
ತನ್ನ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಸರಣಿ ಅತ್ಯಾಧುನಿಕ ಮತ್ತು ಸಂಘಟಿತ ಪ್ರಯತ್ನಗಳು ನಡೆದಿವೆ ಎಂದು ಸಿಬಿಎಸ್ಇ ವಿವರಿಸಿದ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರ ಇಂಟೆಲಿಜೆನ್ಸ್ ಫೂಷನ್ ಆ್ಯಂಡ್ ಸ್ಟ್ರಾಟಜಿಕ್ ಆಪರೇಷನ್ಸ್ (ಐಎಫ್ಎಸ್ಒ) ಘಟಕದಲ್ಲಿ ಈ ದೂರು ದಾಖಲಾಗಿದೆ.
ಅಂಕಗಳ ಪರಿಶೀಲನೆ ಮತ್ತು ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದಂತಹ ಸೇವೆಗಳನ್ನು ಬಯಸುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರವಾಗುವ ಈ ಪೋರ್ಟಲ್ ಮೇ 19ರಂದು ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಪದೇ ಪದೇ ಅಡಚಣೆಗಳನ್ನು ಎದುರಿಸುತ್ತಿದೆ.
ಪೋರ್ಟಲ್ ಅನ್ನು ಹಲವು ಬಾರಿ ಮರು ಆರಂಭಿಸಿದಾಗಲೂ ವಿದ್ಯಾರ್ಥಿಗಳು ನಿರಂತರ ತಾಂತ್ರಿಕ ದೋಷಗಳನ್ನು ವರದಿ ಮಾಡುತ್ತಲೇ ಇದ್ದಾರೆ. ಇದರಿಂದ ಗಡು ಹತ್ತಿರ ಬರುತ್ತಿದ್ದಂತೆ ಅನೇಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಪರದಾಡುತ್ತಿದ್ದಾರೆ.
ಸಿಬಿಎಸ್ಇ ಪ್ರಕಾರ, ಜೂನ್ 2ರಂದು ಮರು ಪ್ರಾರಂಭಿಸಲಾದ ಪೋರ್ಟಲ್ ಕಳೆದ ಮೂರು ದಿನಗಳಿಂದ ನಿರಂತರ ದಾಳಿಗೆ ಒಳಗಾಗಿದೆ. ‘‘ದೇಶದ ಒಳಗಿನ ಮತ್ತು ಹೊರಗಿನ ವಿವಿಧ ಐಪಿ ವಿಳಾಸಗಳಿಂದ ಈ ದಾಳಿಗಳನ್ನು ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ವೆಬ್ಸೈಟ್ ಲಭ್ಯವಾಗದಂತೆ ಮಾಡುವುದು ಮತ್ತು ಮಾಹಿತಿಯನ್ನು ಕದಿಯಲು ಪ್ರಯತ್ನಿಸುವುದು ಇದರ ಉದ್ದೇಶವಾಗಿತ್ತು’’ ಎಂದು ಮಂಡಳಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ದುರುದ್ದೇಶಪೂರಿತ ಪ್ರಯತ್ನಗಳ ಹೊರತಾಗಿಯೂ ಯಾವುದೇ ದತ್ತಾಂಶಕ್ಕೆ ಧಕ್ಕೆಯಾಗಿಲ್ಲ. 24 ಗಂಟೆಗಳ ನಿರಂತರ ನಿಗಾ ಮತ್ತು ತತ್ಕ್ಷಣದ ಪ್ರತಿಕ್ರಿಯೆ ವ್ಯವಸ್ಥೆಗಳು ಈ ಸೈಬರ್ ಭೀತಿಯನ್ನು ನಿಷ್ಕ್ರಿಯಗೊಳಿಸಲು ನೆರವು ನೀಡಿದವು ಎಂದು ಹೇಳಿಕೆ ತಿಳಿಸಿದೆ.
ಈ ಸೈಬರ್ ದಾಳಿಗಳನ್ನು ತಡೆಯಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್, ದ ಡಿಜಿಟಲ್ ಇಂಡಿಯಾ ಕಾರ್ಪೋರೇಷನ್, ಇಂಡಿಯನ್ ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್ ಮತ್ತು ಸಿಇಆರ್ಟಿ-ಇನ್ ಸೇರಿದಂತೆ ಹಲವು ರಾಷ್ಟ್ರೀಯ ಸಂಸ್ಥೆಗಳು ಭಾಗಿಯಾಗಿದ್ದವು ಎಂದು ಸಿಬಿಎಸ್ಇ ತಿಳಿಸಿದೆ.






