ಆಂಧ್ರದ ಕಾಕಿನಾಡಗೆ ಅಪ್ಪಳಿಸಿದ ‘ಮೊಂಥಾ’ ಚಂಡಮಾರುತ

Photo : PTI
ಹೈದರಾಬಾದ್, ಅ. 28: ಭೀಕರ ಚಂಡಮಾರುತ ‘ಮೊಂಥಾ’ ಆಂಧ್ರಪ್ರದೇಶದ ಕಾಕಿನಾಡ ಕರಾವಳಿಗೆ ಮಂಗಳವಾರ ಸಂಜೆ ಅಪ್ಪಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಚಂಡಮಾರುತದ ಪ್ರಭಾವ ಆಂಧ್ರಪ್ರದೇಶದ ಕಾಕಿನಾಡ, ಕೃಷ್ಣ, ಎಲ್ಲಾರು, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಡಾ. ಬಿ.ಆರ್. ಅಂಬೇಡ್ಕರ್ ಕೋನಸೀಮಾ, ಅಲ್ಲುರಿ ಸೀತಾರಾಮ ರಾಜು ಜಿಲ್ಲೆಯ ಚಿಂತುರು ಹಾಗೂ ರಾಂಪಚೋದವರಂ ವಿಭಾಗಗಳಲ್ಲಿ ತೀವ್ರವಾಗಿರಲಿದೆ ಎಂದು ಎಂದು ಅದು ಹೇಳಿದೆ.
ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಂಗಳವಾರ ರಾತ್ರಿ 8.30ರಿಂದ ಬುಧವಾರ ಬೆಳಗ್ಗೆ 6 ಗಂಟೆ ವರೆಗೆ ಈ ಏಳು ಜಿಲ್ಲೆಗಳಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ರದ್ದುಗೊಳಿಸಿ ಆದೇಶ ನೀಡಿತ್ತು. ಈ ಚಂಡಮಾರುತದಿಂದ ರಾಜ್ಯದ 22 ಜಿಲ್ಲೆಗಳ 403 ಮಂಡಲಗಳಲ್ಲಿ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅದು ಹೇಳಿತ್ತು.
ಆಂಧ್ರಪ್ರದೇಶದ ಕರಾವಳಿ, ರಾಯಲಸೀಮಾ, ತೆಲಂಗಾಣ, ದಕ್ಷಿಣ ಚತ್ತೀಸ್ಗಢ, ಮತ್ತು ಒಡಿಶಾದಲ್ಲಿ ರಾತ್ರಿಯಿಡೀ ಬಿರುಗಾಳಿ ಸಹಿತ ಭಾರಿ ಮಳೆ ಮತ್ತು ಚಂಡಮಾರುತದ ಅಲೆಗಳು ಮುಂದುವರಿಯಲಿದೆ ಇದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಕಚೇರಿ ತಿಳಿಸಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರಕಾರ ಕರಾವಳಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಿತ್ತು. 2,200 ಪರಿಹಾರ ಕೇಂದ್ರಗಳನ್ನು ಆರಂಭಿಸಿತ್ತು. 11 ಎನ್ಡಿಆರ್ಎಫ್ ಹಾಗೂ 12 SDRF ತಂಡಗಳನ್ನು ನಿಯೋಜಿಸಿತ್ತು. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (APASDMA) 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲು ನಿಯಂತ್ರಣ ಕೊಠಡಿಯನ್ನು ಆರಂಭಿಸಿತ್ತು.
ಒಡಿಶಾದ 9 ಜಿಲ್ಲೆಗಳಲ್ಲಿ ಭಾರಿ ಪರಿಣಾಮ ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸರಕಾರ ಬಾರೀ ಸಿದ್ಧತೆ ನಡೆಸಿತ್ತು. ಗರ್ಭಿಣಿಯರು ಸೇರಿದಂತೆ ಸುಮಾರು 3000ಕ್ಕೂ ಅಧಿಕ ಮಂದಿಯನ್ನು ಅದು ಸ್ಥಳಾಂತರಿಸಿತ್ತು. 1445 ಪರಿಹಾರ ಶಿಬಿರಗಳನ್ನು ಆರಂಭಿಸಿತ್ತು. 140 ರಕ್ಷಣಾ ತಂಡಗಳನ್ನು ನಿಯೋಜಿಸಿತ್ತು. ಜಿಲ್ಲೆಗಳ ಎಲ್ಲಾ ಶಾಲೆಗಳು ಹಾಗೂ ಅಂಗನವಾಡಿ ಅಕ್ಟೋಬರ್ 30ರ ವರೆಗೆ ರಜೆ ಘೋಷಿಸಿತ್ತು.
ಚೆನ್ನೈ, ತಿರುವಲ್ಲೂರು, ರಾಣಿಪೇಟ್ ಹಾಗೂ ಕಾಂಚಿಪುರಂ ಸೇರಿದಂತೆ ಉತ್ತರ ತಮಿಳುನಾಡಿನಲ್ಲಿ ಸೋಮವಾರ ಭಾರೀ ಮಳೆ ಸುರಿದಿದೆ. ಚಂಡಮಾರುತ ಆಂಧ್ರಪ್ರದೇಶದಿಂದ ಹಾದು ಹೋಗುವ ವರೆಗೆ ಇಲ್ಲಿ ಮಳೆ ಸುರಿಯಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಹಿನ್ನೆಲೆಯಲ್ಲಿ ಅಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ತಿರುವಳ್ಳೂರು ಹಾಗೂ ಚೆನ್ನೈ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಶಾಲೆಗಳಿಗೆ ರಜೆ ಘೋಷಿಸಿದ್ದರು.
ಚಂಡಮಾರುತದ ಹಿನ್ನೆಲೆಯಲ್ಲಿ ತೆಲಂಗಾಣ ಹಾಗೂ ಆಂಧ್ರಪ್ರದೇಶದ ನಡುವಿನ 35 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಜಿಎಂಆರ್ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದರು.
ದಕ್ಷಿಣ ಕೇಂದ್ರ ರೈಲ್ವೆ ಹಾಗೂ ಪೂರ್ವ ಕರಾವಳಿ ರೈಲ್ವೆ ಮುಂದಿನ ಎರಡು ದಿನಗಳ ಕಾಲ 100 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿತ್ತು.







