ಸಶಸ್ತ್ರ ಪಡೆಗಳಿಗಾಗಿ 1.10 ಲಕ್ಷ ಕೋಟಿ ರೂ. ಮೌಲ್ಯದ ಖರೀದಿಗೆ DAC ಹಸಿರು ನಿಶಾನೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ | Photo Credit : PTI
ಹೊಸದಿಲ್ಲಿ, ಸೆ. 7: ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸೋಮವಾರ ನಡೆದ ರಕ್ಷಣಾ ಖರೀದಿ ಮಂಡಳಿಯು (DAC) ಸಶಸ್ತ್ರ ಪಡೆಗಳಿಗಾಗಿ ಸುಮಾರು 1.10 ಲಕ್ಷ ಕೋಟಿ ರೂ. ಮೌಲ್ಯದ ಖರೀದಿ ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ.
ಭಾರತೀಯ ಸೇನೆಯು ರಾಸಾಯನಿಕ, ಜೈವಿಕ, ರೇಡಿಯೊಲಾಜಿಕಲ್ ಮತ್ತು ನ್ಯೂಕ್ಲಿಯರ್ (CBRN) ವಿಚಕ್ಷಣ ವಾಹನಗಳು, ಹೈ ಮೊಬಿಲಿಟಿ ವಾಹನಗಳು (HMV), ಸ್ವಯಂಚಾಲಿತ ಯಾಂತ್ರಿಕ ಮೈನ್ ಲೇಯರ್ಗಳು (MML), ಸುಧಾರಿತ ಲಘು ಹೆಲಿಕಾಪ್ಟರ್ಗಳು (ALH), ಟ್ರಾಲ್ ಟ್ಯಾಂಕ್ ಗಳು ಮತ್ತು ಸರ್ವತ್ರ ಸೇತುವೆ ವ್ಯವಸ್ಥೆಗಳನ್ನು ಒಳಗೊಂಡಂತೆ ತನ್ನ ಕಾರ್ಯಾಚರಣೆ ಮತ್ತು ಚಲನಶೀಲತೆಯ ಸಾಮರ್ಥ್ಯಗಳನ್ನು ಬಲಪಡಿಸುವ ವಿವಿಧ ಉಪಕರಣಗಳಿಗೆ ಅನುಮೋದನೆಯನ್ನು ಪಡೆದುಕೊಂಡಿದೆ.
ಭಾರತೀಯ ನೌಕಾಪಡೆಗಾಗಿ ವಿನ್ಯಾಸ ಮತ್ತು ಅಭಿವೃದ್ಧಿಯೊಂದಿಗೆ ಅರುಧ್ರ ರಾಡಾರ್ಗಳು ಹಾಗೂ ಮರೈನ್ ಗ್ಯಾಸ್ ಟರ್ಬೈನ್ಗಳ ಖರೀದಿಗೆ DAC ಅನುಮೋದನೆ ನೀಡಿದೆ.
ಭಾರತೀಯ ವಾಯುಪಡೆಯು ತನ್ನ ಯುದ್ಧ ವಿಮಾನಗಳು, ಸಾರಿಗೆ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳ ಯುದ್ಧ ಸಾಮರ್ಥ್ಯಗಳನ್ನು ಸುಧಾರಿಸುವ ಪ್ರಸ್ತಾವಗಳೊಂದಿಗೆ ನೆಲ-ಆಧಾರಿತ ಬಹುಉದ್ದೇಶದ ಜಾಮರ್ಗಳ ಖರೀದಿ ಮತ್ತು ರಕ್ಷಣಾ ಪಡೆಗಳ ಸುರಕ್ಷಿತ ಪ್ರವೇಶ ಕಾರ್ಡ್ ವ್ಯವಸ್ಥೆಯ ಸ್ಥಾಪನೆಗೆ ಅನುಮೋದನೆ ಪಡೆದುಕೊಂಡಿದೆ. DAC ಅನುಮೋದಿಸಿದ ಒಟ್ಟು ಖರೀದಿಯಲ್ಲಿ ದೇಶೀಯ ಉದ್ಯಮವು ಶೇ. 98ರಷ್ಟು ಪಾಲು ಹೊಂದಿರಲಿದೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.






